ದೊಡ್ಡಬಳ್ಳಾಪುರ: ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಂಟೈನರ್ ಕಡೆಗೆ ಓಡಿ ಹೋಗಿ, ಅದರಡಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ ನಗರದ ದೊಡ್ಡಬಳ್ಳಾಪುರದ ಇಸ್ಲಾಂಪುರದಲ್ಲಿ ನಡೆಯಿತು. ಲಾರಿ ಚಕ್ರಗಳು ವ್ಯಕ್ತಿಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರಸ್ತೆ ಬದಿ ಕೈಕಟ್ಟಿಕೊಂಡು ನಿಂತಿದ್ದ ವ್ಯಕ್ತಿ ನೋಡನೋಡುತ್ತಲೇ ದಿಢೀರ್ ಆಗಿ ಚಲಿಸುತ್ತಿದ್ದ ಲಾರಿ ಕೆಳಗೆ ಹಾರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯ ಊರು, ಹೆಸರು ಸೇರಿದಂತೆ ಯಾವುದೇ ವಿವರ ತಿಳಿದು ಬಂದಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರತ್ಯೇಕ ಅಪಘಾತ ಪ್ರಕರಣ: ಪಾದಚಾರಿಯೊಬ್ಬರಿಗೆ ಚಿಗರಿ ಬಸ್ ಗುದ್ದಿ, ಅವರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ರಸ್ತೆ ದಾಟುವಾಗ ವೇಗವಾಗಿ ಬಂದ ಬಸ್ ಪಾದಚಾರಿ ಕಾಲಿನ ಮೇಲೆ ಹಾದು ಹೋಗಿದೆ. ಕಾಲಿಗೆ ಗಂಭೀರ ಗಾಯವಾಗಿದೆ. ಸಾರ್ವಜನಿಕರು ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಸ್‌ನಡಿ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಸಾವು: ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೊಸ ಬಸ್ ನಿಲ್ದಾಣದಲ್ಲಿ ಚಾಲಕ ಬಸ್ ಅನ್ನು ಹಿಂಬದಿಗೆ ತೆಗೆದುಕೊಳ್ಳುತ್ತಿರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಾಯಭಾಗಗೆ ಹೋಗುತ್ತಿದ್ದ ಬಸ್ ಇದಾಗಿದ್ದು, ಮೃತನ ಗುರುತು ಪತ್ತೆಯಾಗಿಲ್ಲ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ: ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀನ್ ವ್ಯೂ ಅಪಾರ್ಟ್ಮೆಂಟ್ನಲ್ಲಿ ಕೇರಳ ಮೂಲದ ಜೊಮೊನ್ ವರ್ಗಿಸ್ ಎಂಬ ಹೆಸರಿನ ಕಾರು ಚಾಲಕ ಮಲಯಾಳಂನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕಳೆದ 1 ವರ್ಷದಿಂದ ಮನೆ ಮಾಲೀಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳ್ಳತನ ಆರೋಪದ ಮೇಲೆ ಈತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಆದರೆ ಈತ ಕದ್ದಿರುವ ಬಗ್ಗೆ ಯಾವುದೇ ಸಾಕ್ಷಿ ಸಿಗದೇ ಇದ್ದ ಕಾರಣ ಠಾಣೆಯಿಂದ ಬಿಟ್ಟು ಕಳುಹಿಸಿದ್ದರು. ಇದಾದ ಬಳಿಕ ಮನನೊಂದು ತಾನು ವಾಸವಿದ್ದ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಕೋಲಾರ: ತಾಯಿಯ ಸಮಾಧಿ ಬಳಿ ಆತ್ಮಹತ್ಯೆ ಮಾಡಿಕೊಂಡ ಮಗ