ಹೊಸಕೋಟೆ: ಹಳೆಯ ವೈಷಮ್ಯ ಹಿನ್ನೆಲೆ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ತೆಗೆದು ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಇಸ್ಮಾಯಿಲ್ ಖಾನ್ (26) ಕೊಲೆಯಾದ ವ್ಯಕ್ತಿ.
ಇದೇ ಗ್ರಾಮದ ಸೈಯದ್ ಹಿದಾಯತ್ ಶಾ, ಸೈಯದ್ ಅಜಿಮ್ ಶಾ, ಮತ್ತು ಸಯ್ಯದ್ ಅಖಿಲ್ ಶಾ ಎಂಬುವವರು ಕೊಲೆಗೈದ ಆರೋಪಿಗಳು. ಅಂದಹಾಗೆ ಕಳೆದ ಹಲವು ದಿನಗಳಿಂದ ದಾಯಾದಿಗಳ ಮಧ್ಯೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿತ್ತು. ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಡ್ರಾಗರ್ನಿಂದ ಇಸ್ಮಾಯಿಲ್ ಖಾನ್ ಮೇಲೆ ಹಲ್ಲೆ ನಡೆಸಲಾಗಿದೆ. ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದ ಹಿನ್ನೆಲೆ ಇಸ್ಮಾಯಿಲ್ ಖಾನ್ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಹೇಳಿದ್ದಾರೆ.
ಜತೆಗೆ ಕೊಲೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಕೊಲೆ ಮಾಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿ ಗ್ರಾಮಸ್ಥರು ಮುಂದೆ ಹೇಳಿಕೊಂಡ ಗಂಡ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಕೊತ್ತಲವಾಡಿ ಗ್ರಾಮದ ಕೆ.ಎನ್.ರತ್ನಮ್ಮ(30) ಮೃತರು. ಕೊಲೆ ಆರೋಪಿ ಮಹೇಶ್ (41) ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದಾನೆ.
ಎಂಟು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಗಳ ಬಂಧನ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿ ಬಿಸಾಡಿ ಎಂಟು ವರ್ಷದ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಾರ್ಚ್ 18ರಂದು ಜಿಗಣಿ ಪೊಲೀಸರು ಬಂಧಿಸಿದ್ದಾರೆ.. 'ಸಿ' ರಿಪೋರ್ಟ್ ಆಗಿದ್ದ ಪ್ರಕರಣದ ಹಂತಕರ ಹುಡುಕಾಟದ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಭಾಗ್ಯಶ್ರೀ ಮತ್ತು ಸುಪುತ್ರ ಶಂಕರಪ್ಪ ತಳವಾರ್ ಬಂಧಿತ ಆರೋಪಿಗಳು. ನಿಂಗರಾಜು ಕೊಲೆಯಾಗಿದ್ದ ವ್ಯಕ್ತಿ.
ಕುಡಿದ ಮತ್ತಿನಲ್ಲಿದ್ದ ಯುವಕ ಕೆರೆಗೆ ಹಾರಿ ಸಾವು: ಯುಗಾದಿ ಹಬ್ಬಕ್ಕೆಂದು ಅಕ್ಕನ ಮನೆಗೆ ಬಂದಿದ್ದ ಯುವಕ ಕುಡಿದ ನಶೆಯಲ್ಲಿ ಕೆರೆಗೆ ಹಾರಿ ಪ್ರಾಣ ಬಿಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆಯಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಮೃತ ಯುವಕ ಕೆರೆಯ ಬಳಿ ಮದ್ಯಪಾನ ಮಾಡಿದ್ದು, ನಂತರ ಕುಡಿದ ಮತ್ತಿನಲ್ಲಿದ್ದ ಯುವಕ ಕೆರೆಗೆ ಹಾರಿದ್ದಾನೆ. ಕೆರೆಗೆ ಬಿದ್ದನ್ನು ಕಂಡ ತಕ್ಷಣವೇ ಆತನ ಪ್ರಾಣ ರಕ್ಷಣೆಗಾಗಿ ಸ್ನೇಹಿತರು ಹಗ್ಗ ಎಸೆದಿದ್ದಾರೆ. ಆದರೇ ಹಗ್ಗ ಹಿಡಿದುಕೊಳ್ಳಲು ಸಾಧ್ಯವಾಗದೆ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಿಬಿಎಂಪಿ ಇತಿಹಾಸದಲ್ಲೇ 2,500 ಕೋಟಿ ಮೊತ್ತದ ಅತೀ ದೊಡ್ಡ TDR ಹಗರಣ : ಸಿಬಿಐಗೆ ವಹಿಸಲು ಎನ್.ಆರ್. ರಮೇಶ್ ಆಗ್ರಹ