ಹೊಸಕೋಟೆ: ಹಲಸಿನ ಹಣ್ಣಿಗೆ ಬಹುದೊಡ್ಡ ಮಾರುಕಟ್ಟೆ ಇದ್ದರೂ ಲಾಕ್ಡೌನ್ನಿಂದಾಗಿ ವ್ಯಾಪಾರಿಗಳು ಹಳ್ಳಿಗಳತ್ತ ಮುಖ ಮಾಡದ ಪರಿಣಾಮ ಮರಗಳಲ್ಲೇ ಹಣ್ಣುಗಳು ಕೊಳೆಯುವ ಸ್ಥಿತಿಗೆ ತಲುಪಿದೆ. ಈ ಮೊದಲು ಇಟ್ಟಸಂದ್ರ, ಈಸೂರು, ಈ ಹೊಸಹಳ್ಳಿ, ರಾಮಗೋವಿಂದಪುರ, ಚೀಮಸಂದ್ರ, ಅನುಪಹಳ್ಳಿ ಸೇರಿ ಹಲವೆಡೆಯ ಹಲಸು ಕೊಳ್ಳಲು ವ್ಯಾಪಾರಿಗಳ ದಂಡು ರೈತರ ಮನೆ ಬಾಗಿಲಿಗೆ ಬರುತ್ತಿದ್ದರು. ಆದರೆ, ಲಾಕ್ಡೌನ್ ಪರಿಣಾಮ ಹಣ್ಣು ಖರೀದಿಸುವವರೇ ಇಲ್ಲದಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ , ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲೂ ವ್ಯಾಪಾರ ಕುಸಿದಿದ್ದು, ಲೋಡ್ಗಟ್ಟಲೆ ಕಾಯಿಗಳು ಮಣ್ಣು ಪಾಲಾಗುತ್ತಿವೆ. ತಳ್ಳು ಗಾಡಿಗಳಲ್ಲಿ ನಗರದ ಓಣಿಗಳಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರೂ ಕೂಡಾ ಲಾಕ್ಡೌನ್ಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದಾರೆ .
ಇನ್ನೂ ಕೆಲವರು ಹೊಸಕೋಟೆಯಿಂದ ಚಿಂತಾಮಣಿ, ಮದನಪಲ್ಲಿ, ಆಂಧ್ರಪ್ರದೇಶ ಕಡೆ ಹೋಗುವ ಮಾರ್ಗದ ರಸ್ತೆಯ ಬದಿಯಲ್ಲಿ ಹಲಸು ವ್ಯಾಪಾರ ಮಾಡುತ್ತಿದ್ದು, ಊರುಗಳಿಗೆ ಹೋಗುವವರು ಹಲಸಿನ ಹಣ್ಣನ್ನು ಕೊಂಡುಕೊಂಡು ಹೋಗುತ್ತಿದ್ದರು. ಆದರೆ, ಲಾಕ್ಡೌನ್ ಬಂದ ಮೇಲೆ ಜನ ಯಾರು ಅಷ್ಟಾಗಿ ಹಲಸಿನ ಹಣ್ಣನ್ನು ಕೊಳ್ಳಲು ಬರುತ್ತಿಲ್ಲ ಇದರಿಂದ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹೂಡಿ ಕೈ ಸುಟ್ಟು ಕೊಳ್ಳುವ ಪರಿಸ್ಥಿತಿ ಎದುರಾಗಿದೆ.