ನೆಲಮಂಗಲ(ಬೆಂ.ಗ್ರಾಮಾಂತರ): 500 ವರ್ಷಗಳ ಇತಿಹಾಸ ಇರುವ ತಾಲೂಕಿನ ನಿಜಗಲ್ಲು ಸಿದ್ದರಬೆಟ್ಟಕ್ಕೆ ಲೇಸರ್ ಬೆಳಕಿನ ಮೂಲಕ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿಯೇ ಇರುವ ಬೆಟ್ಟ ಲೇಸರ್ ಬೆಳಕಿನಿಂದ ಎಲ್ಲರ ಗಮನ ಸೆಳೆಯುತ್ತಿದೆ. ಹನುಮ ಜಯಂತಿಯಂದು ಬೆಟ್ಟಕ್ಕೆ 500 ಮಂದಿ ಹನುಮ ಮಾಲೆ ಧರಿಸಿದ ಭಕ್ತರು ಬೆಟ್ಟಕ್ಕೆ ಪಾದಯಾತ್ರೆ ಮಾಡಲಿದ್ದಾರೆ.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ನಿಜಗಲ್ಲು ಸಿದ್ದರಬೆಟ್ಟಕ್ಕೆ 500 ವರ್ಷಗಳ ಇತಿಹಾಸವಿದೆ. ಹೊಯ್ಸಳ, ವಿಜಯನಗರ, ಮರಾಠ, ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟ ಪ್ರದೇಶ, ನಿಜಗಲ್ಲು ದುರ್ಗಕ್ಕೆ ಸಿದ್ದರಬೆಟ್ಟ, ಉದ್ದಂಡಯ್ಯನ ಬೆಟ್ಟ, ಶೂರಗಿರಿ ಅಂತಾನೂ ಕರೆಯಲಾಗಿದೆ. ಸಿದ್ದರ ನೆಲೆಯಾಗಿರುವ ಸಿದ್ದರ ಬೆಟ್ಟ ಹಲವು ಮಹಾಪುರುಷರ ತಪ್ಪಸ್ಸಿನ ನೆಲೆಯಾಗಿದೆ. ಬೆಟ್ಟದಲ್ಲಿ ಕೋಟೆ, ಖಜಾನೆ, ಅರಮನೆ, ಸಿದ್ದರಗುಡಿ, ಗಣಪತಿ ದೇವಾಲಯ, ಲಕ್ಷ್ಮಿ ನರಸಿಂಹ ದೇವಾಲಯ, ವೀರಭಧ್ರ, ಮುನೇಶ್ವರ, ಆಂಜನೇಯ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಹಣೆ ಇಲ್ಲದೇ ಬೆಟ್ಟದಲ್ಲಿರುವ ಕೋಟೆ, ದೇವಾಲಯಗಳು ಪಾಳುಬಿದ್ದಿವೆ.
ನೆಲಮಂಗಲ ತಾಲೂಕಿನ ಯುವ ಸಮುದಾಯ ಮತ್ತು ಶ್ರೀನಿಜಗಲ್ಲು ಸಿದ್ದರಬೆಟ್ಟ ಸೇವಾ ಸಮಿತಿ ಬೆಟ್ಟಕ್ಕೆ ಕಾಯಕಲ್ಪ ನೀಡಲು ಮುಂದಾಗಿದೆ. ಈಗಾಗಲೇ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಲಾಗಿದ್ದು, ನಿಜಗಲ್ಲು ಸಿದ್ದರಬೆಟ್ಟವನ್ನ ವಿಶ್ವ ಪ್ರಸಿದ್ಧಿಯನ್ನಾಗಿ ಮಾಡಲು 3,562 ಅಡಿ ಎತ್ತರ ಬೆಟ್ಟವನ್ನು ಲೇಸರ್ ಬೆಳಕಿನಿಂದ ಅಲಂಕಾರ ಮಾಡಲಾಗಿದೆ. ಇಡೀ ಬೆಟ್ಟವನ್ನು ಲೇಸರ್ ಬೆಳಕಿನಿಂದ ಸಿಂಗಾರ ಮಾಡಲಾಗಿದ್ದು, ಲೇಸರ್ ಬೆಳಕಿನಿಂದ ದೀಪಾಲಂಕಾರಗೊಂಡ ಇಡೀ ಬೆಟ್ಟವೇ ಬೆಳಕಿನ ದಿಬ್ಬದಂತೆ ಕಾಣುತ್ತಿದೆ. ದೀಪಾಲಂಕಾರಕ್ಕಾಗಿ 8 ಲಕ್ಷ ಖರ್ಚು ಮಾಡಲಾಗಿದ್ದು, ಡಿಸೆಂಬರ್ 25 ರಿಂದ 27 ರವರೆಗೂ ದೀಪಾಲಂಕಾರದಿಂದ ನಿಜಗಲ್ಲು ಬೆಟ್ಟ ಕಂಗೊಳಿಸಲಿದೆ.
ಇದನ್ನೂ ಓದಿ: ಮಧ್ಯರಾತ್ರಿ ಪೆಟ್ರೋಲ್ ಬಂಕ್ಗೆ ನುಗ್ಗಿದ ದುಷ್ಕರ್ಮಿಗಳು : ಲಾಂಗ್ ತೋರಿಸಿ 20 ಸಾವಿರ ರೂ. ದೋಚಿ ಪರಾರಿ
ಡಿಸೆಂಬರ್ 27 ರ ಹನುಮ ಜಯಂತಿಯಂದು ಬೆಟ್ಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನೆಲಮಂಗಲ ತಾಲೂಕಿನ ಸುತ್ತಮುತ್ತಲಿನ 500ಕ್ಕೂ ಹೆಚ್ಚು ಹನುಮ ಮಾಲೆ ಧರಿಸಿದ ಭಕ್ತರು ಬೆಟ್ಟಕ್ಕೆ ಪಾದಯಾತ್ರೆ ಮಾಡಲಿದ್ದಾರೆ. ಜನಪದ ಕಲಾ ತಂಡಗಳು ಹಾಗೂ ಪೂರ್ಣ ಕುಂಭಗಳ ಮೂಲಕ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಲಾಗುತ್ತದೆ. ಬೆಟ್ಟದಲ್ಲಿ ಪಾಳು ಬಿದ್ದಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದ್ದಾಗಿರುವ ನಿಜಗಲ್ಲು ಸಿದ್ದರಬೆಟ್ಟ ಸೇವಾ ಸಮಿತಿ 20 ಲಕ್ಷದಲ್ಲಿ ಯೋಜನೆ ಸಿದ್ದಪಡಿಸಿದೆ. ಅದರ ನಿಮಿತ್ತ ಬೆಟ್ಟದಲ್ಲಿ ಹೋಮಹವನ ಕಾರ್ಯಕ್ರಮ ಆಯೋಜಿಸಿವೆ.