ಬೆಂಗಳೂರು: ಈಸ್ಟರ್ ಸಂಡೇಯಂದು ಶ್ರೀಲಂಕಾದಲ್ಲಿ ನಡೆದಿದ್ದ ಬಾಂಬ್ ಸ್ಪೋಟದಿಂದ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣವರ್ ಅವರು ನಗರ ಪೊಲೀಸ್ ಆಯುಕ್ತರಿಗೆ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.
ಮೆಜೆಸ್ಟಿಕ್ ಸುತ್ತಮುತ್ತ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸುನೀಲ್ಕುಮಾರ್ ಅವರಿಗೆ ಡಿಸಿಪಿ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿರುವ ಚಿಕ್ಕ ಪೇಟೆ ಉಪವಿಭಾಗದ ಉಪ್ಪಾರಪೇಟೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ, ಕಾಟನ್ ಪೇಟೆ, ಚಾಮರಾಜ ಪೇಟೆ ಹಾಗೂ ಕೆಎಸ್ ಆರ್ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಮಸೀದಿ, ಚರ್ಚ್, ಮಾಲ್ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಡಿಸಿಪಿ ಚೆನ್ನಣ್ಣವರ್ ಮನವಿ ಮಾಡಿದ್ದಾರೆ.
ಮೊನ್ನೆ ತಾನೆ ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಬಳಿ ಅನುಮಾನಾಸ್ಪದ ವ್ಯಕ್ತಿ ಓಡಾಡಿ ಆತಂಕ ಸೃಷ್ಟಿಸಿದ್ದ. ಆದ್ರೆ ಆತನ ಜಾಲ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು ಸಾಜಿದ್ಖಾನ್ ಎಂದು ಗರುತಿಸಿದ್ದರು. ಅಲ್ಲದೆ, ಆ ವ್ಯಕ್ತಿ ರಾಜಸ್ಥಾನದ ಮೂಲದವನಾಗಿದ್ದು, ಶಹನಾಯಿ ಬಾರಿಸುವ ಕಲಾವಿದ. ಸಾಜಿದ್ಖಾನ್ ವಿರುದ್ಧ ಯಾವುದೇ ಕೇಸುಗಳಿಲ್ಲ ಅನ್ನೋ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು.
ಶ್ರೀಲಂಕಾದ ಚರ್ಚ್ನಲ್ಲಿನ ಬಾಂಬ್ ಸ್ಫೋಟದಂತಹ ಕೃತ್ಯಗಳು ನಗರದಲ್ಲೂ ನಡೆಯಬಾರದು ಎಂದು ಮುನ್ನೆಚ್ಚರಿಕೆಯಾಗಿ ಪೊಲೀಸರು ನಗರದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.