ಆನೇಕಲ್ : ಪದೇಪದೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀವಿಗಳ ಸಾವು ಪ್ರಾಣಿ ಪ್ರಿಯರನ್ನ ಕಂಗೆಡಿಸಿದೆ. ಮೊನ್ನೆಯಷ್ಟೇ ಕಾಡೆಮ್ಮೆ ಜ್ವರದಿಂದ ಬಳಲಿ ಸಾವನ್ನಪ್ಪಿದರೆ, ಇದೀಗ ಚಿರತೆ ಸಾವು ಉದ್ಯಾನವನದ ಅಧಿಕಾರಿಗಳು, ಪ್ರಾಣಿ ಪಾಲಕರಿಗೆ ನೋವು ತರಿಸಿದೆ.
ಉದ್ಯಾನದ ಮೃಗಾಲಯದಲ್ಲಿದ್ದ 14 ವರ್ಷದ ಚಿರತೆ 'ಸಂಜನಾ' ವಯೋಸಹಜವಾಗಿ ಸಾವನ್ನಪ್ಪಿದೆ. ಸಾಮಾನ್ಯವಾಗಿ ಹೊರಗಡೆಯ ಚಿರತೆಗಳ ಸರಾಸರಿ ಆಯಸ್ಸು 10 ವರ್ಷ. ಆದರೆ, ಸಂಜನಾ 14 ವರ್ಷ ಬದುಕಿದ್ದು, ಪ್ರಾಣಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ. ಮೈಸೂರಿನಿಂದ ಜೂನ್ 2009ರಲ್ಲಿ ಸಂರಕ್ಷಿಸಿ ಬನ್ನೇರುಘಟ್ಟಕ್ಕೆ ಈ ಚಿರತೆಯನ್ನು ಕರೆತರಲಾಗಿತ್ತು. ಮೃಗಾಲಯ ಪ್ರೇಕ್ಷಕರಿಗೆ ಅತ್ಯಾಕರ್ಷಕ ಚಿರತೆ ಗಮನ ಸೆಳೆಯುತಿತ್ತು. ಈ ಸಾವಿಗೆ ಉದ್ಯಾನವನದ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
ಚಿರತೆ ಕಳೆಬರದ ಅಂಗಾಂಗಗಳನ್ನು ತಪಾಸಣೆಗಾಗಿ ಹೆಬ್ಬಾಳ ಪಶು ಸಂಶೋಧನಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಿರತೆ ಸಾವಿನ ಅಧ್ಯಯನಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ ಚಿರತೆಯನ್ನು ಗೌರವಯುತವಾಗಿ ಸಂಸ್ಕಾರ ಮಾಡಿ ವಂದನೆ ಸಲ್ಲಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾಡೆಮ್ಮೆ ಸಾವು : ಜ್ವರದ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿಯಲ್ಲಿನ ಕಾಡೆಮ್ಮೆ ಮೃತಪಟ್ಟಿದೆ. ಹನ್ನೊಂದು ವರ್ಷದ 'ಕುಮ್ಟಾ' ಸಾವನ್ನಪ್ಪಿದ್ದು, ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉದ್ಯಾನದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2012ರ ಫೆಬ್ರವರಿಯಲ್ಲಿ ಮೈಸೂರಿನ ಜಯಚಾಮ ರಾಜೇಂದ್ರ ಮೃಗಾಲಯದಿಂದ ಬನ್ನೇರುಘಟ್ಟ ಸಸ್ಯಾಹಾರಿ ಸಫಾರಿಗೆ ಕರೆಸಲಾಗಿತ್ತು. 2017ರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡಿದ ಕಾಡೆಮ್ಮೆ ಇದಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ: ಪಿಎಸ್‌ಐ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ : ಬರೋಬ್ಬರಿ 30.25 ಲಕ್ಷ ರೂ. ಕಳೆದುಕೊಂಡ ರೈತ