ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕರುನಾಡ ವಿಜಯ ಸೇನೆ ಸಂಘಟನೆ ಕಾರ್ಯೋನ್ಮುಖವಾಗಿದೆ. ಸರ್ಕಾರಿ ಶಾಲಾ ಕಟ್ಟಡಗಳಿಗೆ ಸುಣ್ಣ - ಬಣ್ಣ ಹಚ್ಚುವ ಮೂಲಕ ಶಾಲೆಗಳ ನವೀಕರಣಕ್ಕೆ ಮುಂದಾಗಿದ್ದು, ಈ ಕಾರ್ಯಕ್ಕೆ ವನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ಚಾಲನೆ ನೀಡಿದರು.
ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಕನ್ನಡಪರ ಸಂಘಟನೆಗಳು ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ. ಅದರಲ್ಲೂ ಸಾಕಷ್ಟು ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಪರದಾಡುತ್ತಿರುವ ಈ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ, ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಿಟ್ಟಿನಲ್ಲಿ ಕರುನಾಡ ವಿಜಯ ಸೇನೆ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿರುವುದು ಶ್ಲಾಘನೀಯ. ಹಬ್ಬ ಹರಿದಿನ ಸಮಾರಂಭಗಳು ಬಂತೆಂದರೆ ಕೆಲ ಸಂಘಟನೆಗಳು ಮನರಂಜನಾ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಹಣವನ್ನು ದುಂದುವೆಚ್ಚ ಮಾಡುವ ಬದಲು ಇಂತಹ ಉತ್ತಮ ಕಾರ್ಯಗಳಿಗೆ ಮುಂದಾದರೆ ಮುಂದೊಂದು ದಿನ ನಮ್ಮ ಕರುನಾಡು ಕನ್ನಡಿಗರ ಅಭಿಮಾನದಿಂದ ಮತ್ತಷ್ಟು ಸದೃಢಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಕರುನಾಡ ವಿಜಯ ಸೇನೆಯ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸುಣ್ಣ - ಬಣ್ಣ ಹಚ್ಚುವ ಮೂಲಕ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. 2020ನೇ ನವೆಂಬರ್ ತಿಂಗಳಿನ ಕನ್ನಡ ರಾಜ್ಯೋತ್ಸವದಿಂದ ಹಿಡಿದು 2021ನೇ ನವೆಂಬರ್ ತಿಂಗಳ ವೇಳೆಗೆ ಸುಮಾರು 500 ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ ಎಂದರು.
ಈಗಾಗಲೇ ಬೆಂಗಳೂರು ನಗರದಲ್ಲಿ 7 ಸರ್ಕಾರಿ ಶಾಲೆಗಳ ಪುನಶ್ಚೇತನವಾಗಿದ್ದು, ಇದಕ್ಕೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಟಿ .ಎನ್ ನಾಗಾಭರಣ ಚಾಲನೆ ನೀಡಿದ್ದಾರೆ. ಇನ್ನು ಗ್ರಾಮಾಂತರಕ್ಕೆ ಸಂಬಂಧಿಸಿದಂತೆ, ನಿಡವಂದ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ವನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಶ್ರೀಗಳು ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.