ಆನೇಕಲ್: ಕಳೆದ ಮಂಗಳವಾರ ಅತ್ತಿಬೆಲೆ ಬಿಇಟಿಎಲ್ ಟೋಲ್ ಸಿಬ್ಬಂದಿ ಚಾಲಕ ಜಗದೀಶ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಬಂಧನವಾಗಿದ್ದು, ಟೋಲ್ ಸಿಬ್ಬಂದಿ ದೌರ್ಜನ್ಯದ ವಿರುದ್ದ ಇಂದು ಸಹ ಕರವೇ ಪ್ರತಿಭಟನೆ ನಡೆಸಿದರು.
ಅತ್ತಿಬೆಲೆಯಿಂದ ಟೋಲ್ಗೇಟ್ವರೆಗೂ ಮೆರವಣಿಗೆ ನಡೆಸಿದ ಕರಾವೇ ಶಿವರಾಮೇಗೌಡ ಬಣ ತಾಲ್ಲೂಕು ಶಾಖೆಯ ಕಾರ್ಯರ್ತರು ಬಿಇಟಿಎಲ್ ಟೋಲ್ ಸಿಬ್ಬಂದಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಟೋಲ್ಗೇಟ್ ಬಳಿ ಸಿಬ್ಬಂದಿಗಳೇ ಚಾಲಕನ ಮೇಲೆ ಜಗಳ ತೆಗೆದು ಬಳಿಕ ಆತನ ಮೇಲೆ ಹಲ್ಲೆ ಮಾಡಿದಲ್ಲದೇ ಸುಳ್ಳು ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಯಿಂದ ಚಾಲಕನ ಮೇಲೆ ಸಿಬ್ಬಂದಿಗಳು ನಡೆಸಿದ ದೌರ್ಜನ್ಯ ಗೊತ್ತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟೋಲ್ನಲ್ಲಿ ಗೂಂಡಾಗಳನ್ನ ಬಿಟ್ಟು ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಿರುವ ಇಂತಹ ಸಿಬ್ಬಂದಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಹಲ್ಲೆಗೊಳಗಾದ ಜಗದೀಶ್ಗೆ ಸೂಕ್ತ ಪರಿಹಾರ ನೀಡಬೇಕೆಂದು ಇಲ್ಲಿನ ಕರವೇ ಕಾರ್ಯಕರ್ತರು ಒತ್ತಾಯಿಸಿದರು. ಇದರ ಜೊತೆಗೆ ಸ್ಥಳೀಯರಿಗೆ ಸರ್ವಿಸ್ ರಸ್ತೆ ನೀಡದೇ ಹಗಲು ದರೋಡೆ ಮಾಡುತ್ತಿರುವ ಟೋಲ್ ಸಿಬ್ಬಂದಿಗಳ ಅಟ್ಟಹಾಸಕ್ಕೆ ಬ್ರೇಕ್ ಬಿಳಬೇಕಿದೆ. ಹಾಗಾಗಿ ಇಂದು ಕರ್ನಾಟಕ ಸರಕು ಸಾಗಣೆ ಮಾಲೀಕರ ಸಂಘವೂ ಪ್ರತಿಭಟನೆಯಲ್ಲಿ ಕೈ ಜೊಡಿಸಿ ಟೋಲ್ ಸಿಬ್ಬಂದಿ ದೌರ್ಜನ್ಯದ ವಿರುದ್ದ ಆಕ್ರೋಶ ಹೊರಹಾಕಿದರು.