ದೊಡ್ಡಬಳ್ಳಾಪುರ : ನಿನ್ನೆ ಬೆಳಗ್ಗೆಯಿಂದ ಜಾಲಪ್ಪ ಮಗನ ಮನೆಯನ್ನ ಜಾಲಾಡುತ್ತಿರುವ ಐಟಿ ಅಧಿಕಾರಿಗಳು ಎರಡನೇ ದಿನವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಜಾಲಪ್ಪರವರ ಮಗ ಜೆ. ರಾಜೇಂದ್ರ ಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ಎರಡನೇ ದಿನವೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನಿನ್ನೆ ರಾತ್ರಿ ಇದೇ ಮನೆಯಲ್ಲಿ ತಂಗಿದ್ದ ಅಧಿಕಾರಿಗಳು ಬೆಳಗ್ಗೆ 6 ರಿಂದ ಹಣ, ಆಸ್ತಿ ಮತ್ತು ಹೂಡಿಕೆಗೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿನ ಲಾಕರ್ ಗಳು ಬ್ಯಾಂಕ್ ಲಾಕರ್ ಗಳ ಪರಿಶೀಲನೆ ನಡೆಸಿದ ನಂತರ ಮತ್ತಷ್ಟು ದಾಖಲೆಗಳು ಅಧಿಕಾರಿಗಳ ಕೈಗೆ ಸಿಕ್ಕಿದ್ದು. ದಾಖಲೆಗಳ ಬಗ್ಗೆ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ. ಲ್ಯಾಪ್ ಟಾಪ್ ವಶಕ್ಕೆ ಪಡೆದಿರುವ ಅಧಿಕಾರಿಗಳು ಹಾರ್ಡ್ ಡಿಸ್ಕ್ ನಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಐಟಿ ದಾಳಿ ನಡುವೆ ಆರ್.ಎಲ್.ಜಾಲಪ್ಪ, ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಕೋಲಾರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಆವರಣದಲ್ಲಿರುವ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಐಟಿ ದಾಳಿಯಿಂದ ಮುಕ್ತಿ ನೀಡುವಂತೆ ಗಣಪತಿ ಮೊರೆ ಹೋದರು.
ಕಳೆದ ಎರಡು ದಿನಗಳಿಂದ ಐಟಿ ಅಧಿಕಾರಿಗಳ ಶೋಧ ಕಾರ್ಯ ನಡೆಸುತ್ತಿದ್ದು, ಗಣಪನ ದೇವಾಲಯಕ್ಕೆ ಆಗಮಿಸಿ ಗಣಪನಿಗೆ ಪ್ರಾರ್ಥನೆ ಸಲ್ಲಿಸಿದ್ರು. ಆರ್.ಎಲ್ ಜಾಲಪ್ಪ ಒಡೆತನದ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿಮಾಡಿದ್ದು, ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.