ಬೆಂಗಳೂರು: ಬರಗಾಲ, ಪ್ರವಾಹ ಇವೆಲ್ಲರಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಿ, ಅಧಿಕ ಲಾಭ ಗಳಿಸಿ ಕೃಷಿಯನ್ನೇ ಉದ್ಯೋಗವಾಗಿಸುಕೊಳ್ಳವಂತಹ ಕೃಷಿ ಉದ್ಯೋಗ ಮೇಳವನ್ನು ಬೆಂಗಳೂರು ಹೊರವಲಯದ ಮಂಡೂರಿನಲ್ಲಿ ಆಯೋಜಿಸಲಾಗಿತ್ತು.
ರೈತರಿಗೆ ದುಪ್ಪಟ್ಟು ಲಾಭವನ್ನು ನೀಡುವಂತಹ ಹಲಸು, ತೇಗ, ಸಿಲ್ವರ್ ಓಕ್, ಶ್ರೀಗಂಧ ಸಸಿಗಳು, ರೈತರ ಮಿತ್ರರಾಗಿರುವ ಎತ್ತುಗಳು ಹಾಗೂ ವಿವಿಧ ತಳಿಯ ಕುರಿ, ಮೇಕೆಗಳು, ಇನ್ನೊಂದೆಡೆ ತೋಟಗಾರಿಕೆ, ಮೀನುಗಾರಿಕೆ, ಸಿರಿಧಾನ್ಯ ಪ್ರದರ್ಶನವನ್ನು ಬೆಂಗಳೂರು ಪೂರ್ವ ತಾಲೂಕಿನ ಮಂಡೂರು ಗ್ರಾಮದಲ್ಲಿ ನಡೆದ 2019-20 ನೇ ಸಾಲಿನ ಕೃಷಿ ಉದ್ಯೋಗ ಆಯೋಜಿಸಲಾಗಿತ್ತು. ಮಂಡೂರು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಕೃಷಿ ಮೇಳ ಹಮ್ಮಿಕೊಂಡಿದ್ದು, ಶಾಸಕ ಅರವಿಂದ ಲಿಂಬಾವಳಿ, ಜಿ. ಪಂ. ಸದಸ್ಯ ಡಾ. ಕೆ. ಕೆಂಪರಾಜು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಮಂಡೂರು ಜಿಲ್ಲಾ ಪಂಚಾಯತ್ ಸದಸ್ಯ ಡಾ. ಕೆ. ಕೆಂಪರಾಜು ಮಾತನಾಡಿ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬರಡು ಭೂಮಿಗಳಲ್ಲಿ ಹೆಚ್ಚು ಆದಾಯ ಗಳಿಸುವಂತಹ ಹಲಸು, ತೇಗ, ಶ್ರೀಗಂಧ, ಬೇವು, ಕರಿ ಬೇವು, ನುಗ್ಗೆಮರ ಇತ್ಯಾದಿ ಸಸಿಗಳನ್ನು ಬೆಳೆಸಿ ಆದಾಯ ಗಳಿಸುವಂತೆ ರೈತರಿಗೆ ಅರಿವು ಮೂಡಿಸಲು 'ಬರಡು ಭೂಮಿಯಲ್ಲಿ ಬಂಗಾರ' ಎಂಬ ಶಿರ್ಷಿಕೆಯಡಿ ಕೃಷಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ, ಸೋಲಾರ್, ಜೇನು ಪೆಟ್ಟಿಗೆ ಕೃಷಿ ಹೊಂಡದ ಕವರ್, ಹಾಲಿನ ಪೌಡರ್ ಗಳನ್ನು ವಿತರಿಸಲಾಯಿತು. ಈ ಮೇಳದಲ್ಲಿ ಟ್ರ್ಯಾಕ್ಟ್ರ್, ಬನ್ನೂರು ಕುರಿಗಳು, ಎತ್ತುಗಳ ಪ್ರದರ್ಶನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಒಟ್ಟಾರೆ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುವುದರಿಂದ ರೈತ ಕುಟುಂಬಗಳು ತಮ್ಮ ಭೂಮಿಯಲ್ಲಿ ಫಸಲು ಸಸಿಗಳನ್ನು ನೆಟ್ಟು ಹೆಚ್ಚು ಆದಾಯ ಗಳಿಸಿ ಅಭಿವೃದ್ಧಿ ಹೊಂದುವಂತ ಉದ್ದೇಶದಿಂದ ಈ ಕೃಷಿ ಮೇಳ ಹಮ್ಮಿಕೊಂಡಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಲಿ ಎಂಬ ಆಶಯವಾಗಿದೆ.