ಹೊಸಕೋಟೆ: ಅನರ್ಹಗೊಂಡಿರುವ ಶಾಸಕ ಎನ್.ನಾಗರಾಜ್ ಅವರು ಸರ್ಕಾರದ ಯೋಜನೆಗಳಡಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ತಾಲೂಕು ಆಡಳಿತ ವರ್ಗದ ಮುಖ್ಯಸ್ಥರಿಗೆ ಆಕ್ಷೇಪಣೆ ಸಲ್ಲಿಸಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಆಕ್ಷೇಪಣೆ ಸಲ್ಲಿಸಲಾಯಿತು. ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು, ಉದ್ಘಾಟನೆ, ಪರಿಶೀಲನೆ ಮಾಡುವುದು ನಿರಂತರವಾಗಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಅನರ್ಹ ಶಾಸಕರು ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ನೀಡಬಾರದು, ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಸ್ಪಷ್ಟ ಆದೇಶ ನೀಡಿದೆ. ಆದರೂ, ಕಾನೂನು ಬಾಹಿರವಾಗಿ ಅನರ್ಹ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಸಂಚರಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ಸಹ ದುರ್ಬಳಕೆ ಮಾಡಿಕೊಂಡು ಬೆಂಗಾವಲಾಗಿ ಬಳಸಿಕೊಳ್ಳಲಾಗುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯ ನಗರ ಘಟಕದ ಅಧ್ಯಕ ಬಿ.ವಿ. ಬೈರೇಗೌಡರು ತಹಶೀಲ್ದಾರ್, ಡಿವೈಎಸ್‌ಪಿ , ನಗರಸಭೆ ಪೌರಾಯುಕ್ತರಿಗೆ , ತಾಲೂಕು ಪಂಚಾಯಿತಿ ಇಒಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.