ದೊಡ್ಡಬಳ್ಳಾಪುರ: ಬಹಳ ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟದಲ್ಲಿ ಕಳೆದ ಕೆಲವು ತಿಂಗಳಿಂದ ಚಿರತೆ ಸೇರಿಕೊಂಡು ಸುತ್ತಮುತ್ತಲಿನ ಗ್ರಾಮಗಳ ಕುರಿ, ಮೇಕೆಗಳನ್ನ ಬೇಟೆಯಾಡುತ್ತಿತ್ತು. ಇದರಿಂದ ಜನರು ಬೆಟ್ಟದಲ್ಲಿ ಜಾನುವಾರುಗಳನ್ನು ಮೇಯಿಸಲು ಭಯ ಪಡುತ್ತಿದ್ದರು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಬೆಟ್ಟದ ತಪ್ಪಲಲ್ಲಿ ಬೋನಿಟ್ಟಿದ್ದರು. ಆದರೆ ಚಿರತೆ ಮಾತ್ರ ಬೋನಿಗೆ ಬೀಳದೆ ಜಾನುವಾರುಗಳನ್ನ ಬೇಟೆಯಾಡುತ್ತಾ ಜನರ ನಿದ್ದೆಗೆಡಿಸಿತ್ತು.
ಹದಿನೈದು ದಿನಗಳ ಹಿಂದೆ ವಲಯ ಅರಣ್ಯಾಧಿಕಾರಿ ಚೇತನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಬೋನ್ ಇಟ್ಟಿದ್ದರು. ಮಾಕಳಿ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ತಡರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ಸ್ಥಳೀಯರಲ್ಲಿದ್ದ ಆತಂಕ ದೂರವಾಗಿದೆ.