ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಮತ್ತು ಕೈಗಾರಿಕಾ ಪ್ರದೇಶಗಳ ಸ್ಥಾಪನೆಯಿಂದ ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಜಮೀನಿಗೆ ಬಂಗಾರದ ಬೆಲೆ ಬಂದಿದೆ. ಈ ನಡುವೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡುವ ಮಾಫಿಯಾ ಶುರುವಾಗಿದ್ದು, ತಾಲೂಕಿನ ವಿವಿಧೆಡೆ 164 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಪ್ರಕರಣಗಳು ದಾಖಲಾಗಿವೆ.
ಜೀವಂತ ವ್ಯಕ್ತಿಯನ್ನ ಸಾಯಿಸಿ ನಕಲಿ ದಾಖಲೆ ಸೃಷ್ಟಿಸಿ ಎಂಬಸಿ ಕಂಪನಿಗೆ ಮಾರಾಟ:
ಬ್ಯಾಟರಾಯನಪುರದ ನಿವಾಸಿ ಮುನಿಯಪ್ಪ 1984ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಸರ್ವೆ ನಂಬರ್ 18 /1 ರಲ್ಲಿ 1 ಎಕರೆ ಜಮೀನು ಖರೀದಿಸಿ ಸಾಗುವಳಿ ಮಾಡುತ್ತಿರುತ್ತಾರೆ. ಕಳೆದ ವರ್ಷ ಕೊರೊನಾ ಬಂದ ಹಿನ್ನೆಲೆ ತಮ್ಮ ಜಮೀನಿನ ಕಡೆ ಹೋಗಿರಲಿಲ್ಲ. ಈ ಸಮಯದಲ್ಲಿ ಮುನಿಯಪ್ಪನವರ ಗಮನಕ್ಕೆ ಬಾರದೆ ಪಹಣಿಯಲ್ಲಿ ಸೊಣ್ಣಪ್ಪನಹಳ್ಳಿ ರಾಜಣ್ಣ ಬಿನ್ ಚಿಕ್ಕಮುನಿಯಪ್ಪ ಎಂಬುವರಿಗೆ ಪೌತಿ ಖಾತೆ ಆಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುನಿಯಪ್ಪ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ನಕಲಿ ದಾಖಲೆಗಳ ಮೂಲಕ ಪೌತಿ ಖಾತೆ ಬದಲಾವಣೆಯಾಗಿದ್ದು, ಆನಂತರ ಖಾಸಗಿ ಕಂಪನಿಗೆ 55 ಲಕ್ಷ ರೂ.ಗೆ ಮಾರಾಟವಾಗಿರುವುದು ಕಂಡು ಬಂದಿದೆ. ರಾಜಣ್ಣ ಎಂಬಾತ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಶಾಮೀಲಾಗಿ ಜಮೀನು ವಾರಸುದಾರ ಮುನಿಯಪ್ಪ ತನ್ನ ತಂದೆ ಎಂದು ನಕಲಿ ವಂಶವೃಕ್ಷ ಮತ್ತು ಮರಣ ದಾಖಲೆಗಳನ್ನ ಸೃಷ್ಟಿಸಿ ಪೌತಿ ಖಾತೆ ಮಾಡಿಸಿದ್ದಾರೆ. ಜೀವಂತ ಇರುವ ವ್ಯಕ್ತಿಯನ್ನ ದಾಖಲೆಗಳಲ್ಲಿ ಸಾಯಿಸಿ ಕಂಪನಿಗೆ 55 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಮತ್ತು ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿರುವುದರಿಂದ ರಿಯಲ್ ಎಸ್ಟೇಟ್ ಮತ್ತು ಭೂಗಳ್ಳರ ಚಟುವಟಿಕೆಗಳು ಹೆಚ್ಚಿವೆ. ಗ್ರಾಮದಲ್ಲಿನ ಜಮೀನುಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿ ನೀಲಿಗಿರಿ ತೋಪು ಹಾಕಿ ನಗರಗಳಲ್ಲಿ ವಾಸವಾಗಿರುವವರನ್ನ ಟಾರ್ಗೆಟ್ ಮಾಡುವ ಇವರು, ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಈ ದಂಧೆಯಲ್ಲಿ ರೌಡಿ ಶೀಟರ್, ರಿಯಲ್ ಎಸ್ಟೇಟ್ ಕುಳಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಿದ್ದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ 164 ಎಕರೆಯ 25 ಎಫ್ಐಆರ್ಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ತಿಂಗಳಿಗೊಮ್ಮೆ ಪಹಣಿ ಪರಿಶೀಲಿಸಿ:
ತಾಲೂಕಿನಲ್ಲಿ ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಜಮೀನುಗಳ ಪರಭಾರೆ ನಡೆಯುತ್ತಿರುವುದರಿಂದ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಈ ಕುರಿತು ಮಾಧ್ಯಮಗೋಷ್ಟಿ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ. ಚನ್ನಣ್ಣನವರ್ ತಮ್ಮ ಜಮೀನಿನ ಪಹಣಿಯನ್ನು ತಿಂಗಳಿಗೊಮ್ಮೆ ಪರಿಶೀಲನೆ ಮಾಡಿ ಎಂದು ಸಲಹೆ ನೀಡಿದರು. ಅಲ್ಲದೆ, ಮೊಬೈಲ್ನಲ್ಲೇ ತಮ್ಮ ಜಮೀನು ಪಹಣಿ ನೋಡುವ ಸೌಲಭ್ಯ ಇದ್ದು, ತಮ್ಮ ಪಹಣಿಯಲ್ಲಿ ಖಾತೆ ಬದಲಾವಣೆ ಕುರಿತಂತೆ ಅನುಮಾನ ಬಂದಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಂಪರ್ಕಿಸುವಂತೆ ಜಮೀನು ಮಾಲೀಕರಿಗೆ ತಿಳಿಸಿದ್ದಾರೆ.