ಬೆಂಗಳೂರು/ಆನೇಕಲ್: ದೇಶದ ಮಹಾನ್ ಅಹಿಂಸಾವಾದಿ ಮಹಾತ್ಮಾ ಗಾಂಧಿ ಹುತಾತ್ಮರಾದ ದಿನವನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಿಸಲಾಯಿತು.
ಆನೇಕಲ್ ಪಟ್ಟಣದ ಮಧ್ಯ ಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿ ಎಸ್ಎಫ್ಐ ಮತ್ತು ವಿದ್ಯಾರ್ಥಿ ಸಮೂಹದ ಸಂಯುಕ್ತಾಶ್ರಯದಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲಸಲಿ ಎಂದು ಘೋಷಣೆ ಕೂಗಿದರು. ಅಹಿಂಸಾ ತತ್ವ, ಅಭಿವ್ಯಕ್ತಿ ಸ್ವಾತಂತ್ರ್ಯವೆಲ್ಲವೂ ದೇಶದ್ರೋಹದ ಕೆಲಸ ಎಂಬಂತೆ ಬಿಂಬಿತವಾಗುತ್ತಿರುವ ಹೊತ್ತಲ್ಲಿ ಮಹಾತ್ಮ ಗಾಂಧಿಯವರ ಅಂದಿನ ಆದರ್ಶ ಇಂದು ಹೆಚ್ಚು ಪ್ರಸ್ತುತ ಎಂದು ವಿದ್ಯಾರ್ಥಿಯೊಬ್ಬರು ಸಾರಿ ಹೇಳಿದರು.
ಸೌಹಾರ್ದತೆಯೆಂಬ ಸಿದ್ಧಾಂತ ಇದೀಗ ಅರ್ಥ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಗಾಂಧೀಜಿಯವರು ಸರ್ವಧರ್ಮ ಸಹಿಷ್ಣು ವಾದವನ್ನು ಮನಗಾಣಿಸಿದ್ದರು. ಅಂದಿನ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಗಾಂಧಿ ಚಳವಳಿಗಳ ಮೂಲಕ ಜಗತ್ತಿಗೆ ಮಾದರಿಯಾಗಿದ್ದರು ಇಂದು ಗಾಂಧಿ ಹೆಸರೇಳಿದರೆ ದೇಶದ್ರೋಹಿಯ ಪಟ್ಟ ಕಟ್ಟಲು ಸಿದ್ದರಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.