ಆನೇಕಲ್: ನಿನ್ನೆ ನೆರೆಯ ಹೊಸೂರು ಪಟ್ಟಣದಲ್ಲಿರುವ ಮತ್ತೂಟ್ ಫೈನಾನ್ಸ್ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಸುಮಾರು ಏಳು ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 96 ಸಾವಿರ ನಗದು ಹಣವನ್ನು ದುಷ್ಕರ್ಮಿಗಳು ದೋಚಿ ಕಂಟೈನರ್ನಲ್ಲಿ ಪರಾರಿಯಾಗಿದ್ದರು.
ಘಟನೆ ಬಗ್ಗೆ ಅತ್ತಿಬೆಲೆ ಪೊಲೀಸರು ಟೋಲ್ನಲ್ಲಿ ಪಾಸಾದ ಕಂಟೈನರ್ಗಳ ಚಲನವಲನಗಳನ್ನು ಹೊಸೂರು ಪೊಲೀಸರಿಗೆ ಕರಾರುವಕ್ಕಾಗಿ ಒದಗಿಸುವ ಮೂಲಕ ಹೈದರಾಬಾದ್ನಲ್ಲಿ ಮಾಲುಸಮೇತ ಆರೋಪಿಗಳನ್ನು ಬಂಧಿಸಲು ನೆರವಾಗಿದ್ದಾರೆ.
ಇಂದು ಪೊಲೀಸರು ಎರಡು ಕಂಟೈನರ್ ಸಮೇತ 7 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, 7 ಪಿಸ್ತೂಲು ಹಾಗೂ 89 ಜೀವಂತ ಬುಲೆಟ್ಗಳ ಸಮೇತ ಮಧ್ಯ ಪ್ರದೇಶದ ದರೋಡೆ ಗ್ಯಾಂಗ್ ಅನ್ನು ಹೈದರಾಬಾದ್ನಲ್ಲಿ ಮುಂಜಾನೆ 3 ಗಂಟೆ ನಸುಕಿನಲ್ಲಿ ಹೈದರಾಬಾದ್-ಹೊಸೂರು-ಅತ್ತಿಬೆಲೆ ಪೊಲೀಸರ ಸಹಾಯದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸೂರಿನ ಮುತ್ತೂಟ್ ಫೈನಾನ್ಸ್ ಮ್ಯಾನೇಜರ್ ಹಾಗೂ ಸೆಕ್ಯೂರಿಟಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಘಟನೆಯ ದೃಶ್ಯಾವಳಿಗಳೆಲ್ಲ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದವು. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಕಳ್ಳರ ಗ್ಯಾಂಗನ್ನು ಹೆಡೆಮುರಿ ಕಟ್ಟಿದ್ದಾರೆ.