ಬೆಂಗಳೂರು: ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಸ್ಥಳೀಯ ನಾಯಕರೊಂದಿಗೆ ಚರ್ಚಿಸದೆ ಏಕಾಏಕಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಕ್ಕೆ ಕ್ಷೇತ್ರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಎಂಟಿಬಿ ನಾಗರಾಜ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದು 5 ವರ್ಷ ತಾಲೂಕಿನ ಮತದಾರರ ಸೇವೆ ಮಾಡುವುದಕ್ಕಾಗಿ. ರೈತರು, ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸದೆ ರಾಜೀನಾಮೆ ನೀಡಿ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ತಾಲೂಕಿನ ಯಾವುದೇ ಕಾರ್ಯಕರ್ತರ ಜೊತೆ ಸಮಾಲೋಚಿಸದೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಾರದಾಗಿತ್ತು ಎಂಬ ಅಭಿಪ್ರಾಯ ಮತದಾರರಿಂದ ವ್ಯಕ್ತವಾಗಿದೆ.
ರಾಜ್ಯದಲ್ಲಿ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಆಪರೇಷನ್ ಕಮಲದ ದುಡ್ಡಿನ ಮೋಹ ಹಾಗೂ ಅಧಿಕಾರದ ಆಸೆಗೆ ಬಿದ್ದು ಜನಪ್ರತಿನಿಧಿಗಳು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.