ಹೊಸಕೋಟೆ: ಪಟ್ಟಣದಲ್ಲಿ ಲಾಕ್ಡೌನ್ ಪ್ರಯುಕ್ತ ಹಸಿದವರಿಗೆ ಆಹಾರ ನೀಡುವ ಮಹಾತ್ಕಾರ್ಯವನ್ನು ‘ಕರುಣೆಯ ಗೋಡೆ’ ಯಿಂದ ಹೊಸಕೋಟೆ ಪೊಲೀಸರು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಉಮಾಶಂಕರ್ ಚಾಲನೆ ನೀಡಿದರು.
ದಾನಿಗಳು ನಿತ್ಯ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಕೆಲವರು ದಿನಸಿ ಸಾಮಗ್ರಿಗಳು, ತರಕಾರಿಗಳು, ಮತ್ತು ಹಣ್ಣುಗಳನ್ನ ತಂದು ಕೊಡುತ್ತಾರೆ. ಸ್ನೇಹ ಬಳಗ ಸಂಸ್ಥೆ ಅಡುಗೆ ತಯಾರಿಸಿ ಕರುಣೆಯ ಗೋಡೆಯ ಮೂಲಕ ಪೊಲೀಸರ ಸಹಯೋಗದೊಂದಿಗೆ ನಿರ್ಗತಿಕರಿಗೆ ವಿತರಣೆ ಮಾಡುತ್ತಾರೆ.
ಸಾರ್ವಜನಿಕ ಆಸ್ಪತ್ರೆ ಬಳಿ ಮಮತೆಯ ಗೋಡೆ ಎಂಬ ಹೆಸರಿನಲ್ಲಿ ದಾನಿಗಳು ಮುಂದೆ ಬಂದು ಬಡವರಿಗೆ ಮಧ್ಯಾಹ್ನ ಊಟ ನೀಡುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಮುಸ್ಲಿಂ ಸಮುದಾಯದ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಹೊಸಕೋಟೆ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿರುವ ರೋಗಿಗಳು ಮತ್ತು ರೋಗಿಗಳ ಜೊತೆಯಲ್ಲಿರುವವರಿಗೆ ಒಪ್ಪೊತ್ತಿನ ಊಟ ನೀಡುವ ಮೂಲಕ ಸಂಕಷ್ಟ ಸಮಯದಲ್ಲಿ ನೆರವು ನೀಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಉಮಾಶಂಕರ್, ಲಾಕ್ಡೌನ್ ಇರುವ ಕಾರಣ ಊಟಕ್ಕೆ ಬಹಳ ತೊಂದರೆಗೆ ಒಳಗಾದ ಜನರಿಗೆ ನಮ್ಮ ಪೊಲೀಸ್ ಇಲಾಖೆ, ಸ್ನೇಹ ಬಳಗ ಹಾಗೂ ಇತರರು ಸೇರಿ ಈ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಮಯದಲ್ಲಿ ಸಬ್ಇನ್ಸ್ಪೆಕ್ಟರ್ ರಾಜು, ಪೊಲೀಸ್ ಇಲಾಖೆ ಸ್ನೇಹ ಲೋಕ ಬಳಗದ ಚೇತನ್, ವಿಜಯ್, ಸಾಗರ್, ಸಂತೋಷ್ ಸೇರಿ ಮತ್ತಿತರರು ಹಾಜರಿದ್ದರು.