ಬೆಂಗಳೂರು: ಮನೆ ಮಾಲೀಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ರೀತಿ ಜಗಳ ನಡೆಯುತ್ತಿದ್ದ ಹಿನ್ನೆಲೆ ಮಾಲೀಕರು ಮತ್ತು ಮಂಜುಳಾ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ರು.
ಈ ವೇಳೆ ಪೊಲೀಸರ ಮುಂದೆಯೇ ತನ್ನ ಹಾಗೂ ಪತಿ ಸುಬ್ರಮಣಿ ಮೇಲೆ ಮನೆ ಮಾಲೀಕರು ಹಲ್ಲೆ ಮಾಡಿದ್ದಾರೆ ಎಂದು ಮಂಜುಳಾ ಆರೋಪ ಮಾಡಿದ್ದಾರೆ. ಮನೆ ಮಾಲೀಕರಾದ ಸೋಮಶೇಖರ್, ಗೀತಾ ಮತ್ತು ಬಿಂದು ಎಂಬುವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನೇಣಿಗೆ ಶರಣಾಗಿದ್ದಾರೆ.