ನೆಲಮಂಗಲ : ಶಾರ್ಟ್ ಸರ್ಕ್ಯೂಟ್ನಿಂದ ಹೋಮ್ ಅಪ್ಲೈಯನ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ನಿಡವಂದ ಗ್ರಾಮದ ಸಿದ್ದಾರ್ಥ ಎಂಟರ್ ಪ್ರೈಸಸ್ನ ಕುಕ್ಕರ್ ಮತ್ತು ಹೋಮ್ ಅಪ್ಲೈಯನ್ಸ್ ತಯಾರಿಕಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಂಡ ತಕ್ಷಣವೇ ಕಾರ್ಮಿಕರು ಫ್ಯಾಕ್ಟರಿಯಿಂದ ಹೊರಗೆ ಬಂದಿದ್ದಾರೆ.
ಫ್ಯಾಕ್ಟರಿಯಲ್ಲಿ 300ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಂದ ನೆಲಮಂಗಲ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.
ಓದಿ: ಡ್ರಗ್ಸ್ ಪ್ರಕರಣ: ನಟಿ ಸಂಜನಾ ಜಾಮೀನು ಅರ್ಜಿ ನಾಳೆ ವಿಚಾರಣೆ
ಕುಕ್ಕರ್ ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕಾಗಿ ಥರ್ಮಕೋಲ್, ಕಾಪರ್ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಥರ್ಮಕೋಲ್ಗೆ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ. ಇದರಿಂದ 30 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.
ಫ್ಯಾಕ್ಟರಿಯೊಳಗೆ ಸುರಕ್ಷತಾ ವಿಧಾನಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿದ್ದು, ಬೆಂಕಿ ನಂದಿಸುವ ಉಪಕರಣ ಅಳವಡಿಸದೇ ಇರುವುದು ಅವಘಡಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳ ಆರೋಪವಾಗಿದೆ.