ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್ ಉದ್ದೇಶಕ್ಕಾಗಿ ಗಾಯಗೊಂಡ ಕುದುರೆಗಳನ್ನೂ ಅಮಾನುಷವಾಗಿ ಓಡಿಸುತ್ತಿರುವುದರ ಕುರಿತು ತನಿಖೆಗೆ ನಡೆಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ‘ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್’ (ಕ್ಯುಪಾ) ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರವನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಿತು. ಬಳಿಕ ಅರ್ಜಿಗೆ ಸಂಬಂಧಿಸಿದಂತೆ ಉತ್ತರಿಸಲು ನಿರ್ದೇಶಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ :
ಟರ್ಫ್ ಕ್ಲಬ್ ನಲ್ಲಿ ಜೂಜಿಗಾಗಿ ಕುದುರೆಗಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ಹಣದಾಸೆಗೆ ಗಾಯಗೊಂಡ ಕುದುರೆಗಳನ್ನೂ ರೇಸ್‌ನಲ್ಲಿ ಓಡಿಸಲಾಗುತ್ತಿದೆ. ಇದರಿಂದಾಗಿ ತೀವ್ರವಾಗಿ ನಿತ್ರಾಣಗೊಳ್ಳುವ ಹಾಗೂ ಗಾಯಗೊಳ್ಳುವ ಕುದುರೆಗಳು ಸೂಕ್ತ ಚಿಕಿತ್ಸಾ ವ್ಯವಸ್ಥೆಯಿಲ್ಲದೆ ಸಾವನ್ನಪ್ಪುತ್ತಿವೆ. ದುರವಸ್ಥೆಯಿಂದ ಕೂಡಿರುವ ಕ್ಲಬ್‌ನಲ್ಲಿ ಕುದುರೆಗಳನ್ನು ಹಿಂಸಿಸಲಾಗುತ್ತಿದೆ . ಹೀಗಾಗಿ ಕ್ಲಬ್ ಪರಿಶೀಲಿಸಲು ಹಾಗೂ ಪ್ರಾಣಿ ಹಿಂಸೆ ತಡೆಯಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.