ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದ ವೈದ್ಯರೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಇಂದು ನಡೆದ ಸಭೆ ವಿಫಲವಾಗಿದೆ.
ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ವೈದ್ಯರು ನಾಡಿನ ವಿವಿಧ ಭಾಗದಲ್ಲಿ ವೈದ್ಯ ಸೇವೆ ನೀಡುವ ಮೂಲಕ ತಮ್ಮ ಕಾರ್ಯ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ವೈದ್ಯರು ಕಳೆದ ಏಳು ತಿಂಗಳು ಕಾಲ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಸಿಎಂ ಹಾಗೂ ವೈದ್ಯಕೀಯ ಸಚಿವರು ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ನಡೆಸಿದ್ದಾರೆ. ಅವರಿಗೆ ಸಂಬಳದ ಜೊತೆಗೆ ಇನ್ಸೆಂಟಿವ್ ಅಂತ ಕೊಡುವುದನ್ನು ಸಂಬಳದ ಜೊತೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಅವರ ಬೇಡಿಕೆಗೆ ಸ್ಪಂದಿಸುವ ಕೆಲಸ ಆಗಿದೆ ಎಂದರು.
ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ವೈದ್ಯರು ಪ್ರತಿಭಟನೆ ಬಿಟ್ಟು ಜನರ ಸೇವೆ ಮಾಡುವ ಕೆಲಸ ಮಾಡಬೇಕು. ವೃತ್ತಿಯ ಬಗ್ಗೆ ಜನರು ಮತ್ತು ಸರಕಾರ ಇಟ್ಟಿರುವ ಭರಸವೆಯನ್ನು ಉಳಿಸಿಕೊಳ್ಳಬೇಕು. ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಸಂಬಳ ಹೆಚ್ಚಳ ಮಾಡುವ ನಿಶ್ಚಯ ಆಗಿದೆ. ವೈದ್ಯರು ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.
ಪ್ರತಿಭಟನೆ ಹಿಂಪಡೆಯುವ ವಿಶ್ವಾಸ ಇದೆ:
ಕಳೆದ ಒಂದು ವಾರದಿಂದ ವೈದ್ಯರ ಜೊತೆ ಸಮಾಲೋಚನೆ ಮಾಡಲಾಗುತ್ತಿದೆ. ಆರ್ಥಿಕ ದುಸ್ಥಿತಿ ಹಾಗೂ ಅವರ ಬೇಡಿಕೆ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವೈದ್ಯರಿಗೆ ನೈತಿಕ ಸ್ಪೂರ್ತಿ ನೀಡುವ ಸಲುವಾಗಿ ಸರ್ಕಾರ ಅವರ ಪರವಾಗಿ ತೀರ್ಮಾನ ಕೈಗೊಂಡಿದ್ದೇವೆ. ಇಂದಿನ ಸಭೆ ಫಲಪ್ರದವಾಗಿದೆ. ವೈದ್ಯರು ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಪ್ರತಿಭಟನೆ ಹಿಂಪಡೆಯುತ್ತಾರೆ ಎಂಬ ವಿಶ್ವಾಸ ಇದೆ. ಮೂರು ಹಂತದಲ್ಲಿ ಸಂಬಳ ಹೆಚ್ಚಳಕ್ಕೆ ಅವಕಾಶ ಇದೆ. ಈ ಬಗ್ಗೆ ಅವರು ಚರ್ಚಿಸಿದ ನಂತರ ನಾಳೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಶುಕ್ರವಾರ ಮತ್ತೆ ಸಚಿವರ ಜೊತೆ ಸಭೆ:
ಇದೇ ವೇಳೆ ಮಾತನಾಡಿದ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಗೋಳೂರು ಶ್ರೀನಿವಾಸ್, ವೇತನ ಹೆಚ್ಚಳ ಬಗ್ಗೆ ಸರ್ಕಾರದ ಜತೆ ಚರ್ಚೆ ಆಗಿದೆ. ವೇತನ ಹೆಚ್ಚಳ ಬೇಡಿಕೆಯನ್ನು ಫಲಪ್ರದವಾಗಿ ಈಡೇರಿಸುವ ಬಗ್ಗೆ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದರು.
ಸಚಿವರ ಸಭೆ ಬಗ್ಗೆ 30 ಜಿಲ್ಲೆಗಳ ಸಂಘದ ಪದಾಧಿಕಾರಿಗಳ ಜೊತೆ ನಾವು ಚರ್ಚೆ ಮಾಡ್ತೇವೆ. ಶುಕ್ರವಾರದಂದು ಮತ್ತೆ ಸಚಿವರ ಜತೆ ಸಭೆ ನಡೆಸ್ತೇವೆ. ಮುಂದೇನು ಮಾಡಬೇಕೆಂದು ಶುಕ್ರವಾರ ಚರ್ಚಿಸಿ ನಮ್ಮ ನಿರ್ಧಾರ ಪ್ರಕಟ ಮಾಡ್ತೇವೆ. ಶುಕ್ರವಾರದವರೆಗೂ ನಮ್ಮ ಅಸಹಕಾರ ಪ್ರತಿಭಟನೆ ಮುಂದುವರೆಯಲಿದೆ ಎಂದರು.