ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾತುಕತೆ ನಡೆಸಲು ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೆಹಲಿಯತ್ತ ಪಯಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿದ ಹೆಚ್ಡಿಕೆ, ಬೆಳಗ್ಗೆ 9:50ರ ಏರ್ ಇಂಡಿಯಾ ವಿಮಾನದಲ್ಲಿ ಪುತ್ರ ನಿಖಿಲ್ ಜೊತೆ ದೆಹಲಿಗೆ ತೆರಳಿದರು.
ಎರಡು ಪಕ್ಷಗಳ ಮೈತ್ರಿ ಕುರಿತು ಚರ್ಚಿಸುವ ಸಲುವಾಗಿ ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಅಗತ್ಯ ಬಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ಹಿರಿಯ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಎಚ್ಡಿಕೆ ತಿಳಿಸಿದ್ದಾರೆ.
ದೆಹಲಿ ಪ್ರಯಾಣಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ಇಂದು ಸಂಜೆ ಸಭೆ ಇದೆ. ಅದರಲ್ಲಿ ಮೈತ್ರಿ ವಿಚಾರವಾಗಿ ಚರ್ಚೆ ನಡೆಯಲಿದೆ. ಸಭೆಯ ಫಲಿತಾಂಶ ಏನಿದೆ ಎಂಬುದನ್ನು ನಾನು ನಿಮ್ಮ ದೆಹಲಿ ವರದಿಗಾರರೊಂದಿಗೆ ನಾಳೆ ಬಹಿರಂಗವಾಗಿ ಹಂಚಿಕೊಳ್ಳುತ್ತೇನೆ. ಇನ್ನೂ ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ" ಎಂದು ತಿಳಿಸಿದರು.
"ನಾವು ಇಲ್ಲಿಯವರೆಗೆ ಸೀಟು ಹಂಚಿಕೆಯ ಬಗ್ಗೆ ಯೋಚಿಸಿಲ್ಲ. ಬಿಜೆಪಿಯವರು ಕೂಡ ಈ ವಿಚಾರವನ್ನು ಪ್ರಸ್ತಾಪಿಸಿಲ್ಲ. ಇಂದು ಸಂಜೆಯ ಸಭೆಯಲ್ಲಿ ಎಲ್ಲಾ 28 ಲೋಕಸಭಾ ಸ್ಥಾನಗಳಲ್ಲಿನ ಪ್ರಸ್ತುತ ಪರಿಸ್ಥಿತಿ, ಹಿಂದಿನ ಚುನಾವಣೆಯ ಪರಿಸ್ಥಿತಿ ಹಾಗೂ 2023ರ ವಿಧಾನಸಭೆಯ ಚುನಾವಣೆಯ ನಂತರದ ಪರಿಸ್ಥಿತಿಯ ಬಗ್ಗೆ ನಾವು ವಿವರವಾಗಿ ಚರ್ಚಿಸಲಿದ್ದೇವೆ" ಎಂದರು. ಇಂದು ಮೈತ್ರಿ ಖಚಿತವಾಗಲಿದೆಯಾ? ಎಂಬ ಪ್ರಶ್ನೆಗೆ ಕುಮಾರಸ್ವಾಮಿ "ನೋಡೋಣ" ಎಂದು ಉತ್ತರಿಸಿದರು.
ಇದನ್ನೂ ಓದಿ: ಮೈತ್ರಿ ವಿಚಾರದಲ್ಲಿ ನಮ್ಮ ವರಿಷ್ಠರ ತಿರ್ಮಾನಕ್ಕೆ ಬದ್ಧ.. ಜೆಡಿಎಸ್ ಮಾಜಿ ಶಾಸಕರ ಸಭೆಯಲ್ಲಿ ನಿರ್ಣಯ
ಇದೇ ವೇಳೆ ದೆಹಲಿಯಲ್ಲಿ ಯಾರನ್ನು ಭೇಟಿಯಾಗಲಿದ್ದೀರಿ? ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, "ಗೃಹ ಸಚಿವ ಅಮಿತಾ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಂತಹ ನಿರ್ಧಾರ ಕೈಗೊಳ್ಳುವ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ. ಅಗತ್ಯ ಬಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರು ಮಾತನಾಡುತ್ತಾರೆ" ಎಂದು ತಿಳಿಸಿದರು.
ಕಾವೇರಿ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಚ್ಡಿಕೆ, "ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದೇವೆ. ಕೇಂದ್ರದ ಜಲ ಸಂಪನ್ಮೂಲ ಮಂತ್ರಿಗಳನ್ನು ಭೇಟಿಯಾಗಲು ರಾಜ್ಯ ಸರ್ಕಾರದ ನಾಯಕರು ಹೋಗಿದ್ದಾರೆ. ಕೆಲವು ಮಾಧ್ಯಮಗಳಲ್ಲಿ, ಕಾವೇರಿ ನೀರು ಪ್ರಾಧಿಕಾರ ಹೇಳಿರುವುದಕ್ಕಿಂತ ಹೆಚ್ಚು ಬಿಟ್ಟಿದ್ದಾರೆ ಎಂಬುದನ್ನು ನೋಡಿದೆ. ಸರ್ಕಾರ ನಾವು ನೀರು ಬಿಡ್ತಿಲ್ಲ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದೆ. ಕೋರ್ಟ್ನಲ್ಲಿ ನೋಡಿದ್ರೆ, ನೀರು ಬಿಟ್ಟಿದ್ದೀವಿ ಅಂತ ಹೇಳ್ತಿದ್ದಾರೆ. ಮುಂದೆ ಏನೇನಾಗುತ್ತೆ ಅನ್ನೋದನ್ನು ಕಾದು ನೋಡೋಣ" ಎಂದರು.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಮಹತ್ವದ ಸಭೆ