ದೊಡ್ಡಬಳ್ಳಾಪುರ: ಫೈನಾನ್ಸ್ ಕೊಟ್ಟವರ ಕಿರುಕುಳಕ್ಕೆ ಬೇಸತ್ತ ದಂಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ. ಪತಿ ಸ್ಥಳದಲ್ಲೇ ಮೃತಪಟ್ಟರೇ, ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನ 1:30 ಸಮಯದಲ್ಲಿ ದಂಪತಿ ರೈಲ್ವೆ ಹಳಿಗಳ ಬಳಿ ಬಂದಿದ್ದಾರೆ.
ಆತ್ಮಹತ್ಯೆ ಯತ್ನದಲ್ಲಿ 40 ವರ್ಷದ ಮೌಲಾಖಾನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅವರ ಹೆಂಡತಿ ಸಮೀನಾ ಗಂಭೀರವಾಗಿ ಗಾಯಗೊಂಡಿದ್ದು, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮೌಲಾಖಾನ್ ನಗರದ ಇಸ್ಲಾಂಪುರ ನಿವಾಸಿಯಾಗಿದ್ದು, ಕಳೆದ 17 ವರ್ಷಗಳಿಂದ ನೇಕಾರಿಕೆ ವೃತ್ತಿ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ಮೈಕ್ರೋ ಫೈನಾನ್ಸ್ ಕಂಪನಿಗಳಾದ ಬಂಧನ, SKS, ಬಜಾಜ್ ಫೈನಾನ್ಸ್ನಲ್ಲಿ 1.50 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.
ಸಾಲ ಮರು ಪಾವತಿಸುವಂತೆ ಫೈನಾನ್ಸ್ ಕಂಪನಿ ಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನೇಕಾರಿಕೆ ಕೆಲಸದಿಂದಲೂ ಅಷ್ಟೇನೂ ಆದಾಯ ಇರಲಿಲ್ಲ. ಇಂದು ಬೆಳಗ್ಗೆ ಮನೆ ಮುಂದೆ ಬಂದಿದ್ದ ಫೈನಾನ್ಸ್ ಪ್ರತಿನಿಧಿಗಳು ಸಾಲ ಮರುಪಾವತಿಸುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಬೇಸತ್ತ ಮೌಲಾಖಾನ್ ಮತ್ತು ಸಮೀನಾ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ. ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೊಟ್ಟ ಹಣ ಕೊಡದವರಿಗೆ ಶಿಕ್ಷಿಸು, ನನ್ನ ಗಂಡನ ಆ ಸಂಬಂಧ ಕೆಡಿಸು... ಮಾರಮ್ಮನ ಹುಂಡಿಯಲ್ಲಿ ಭಕ್ತರ ಪತ್ರಗಳು