ಬೆಂಗಳೂರು : ಹಿಂದೂ ಸಂಸ್ಕೃತಿಯಲ್ಲಿ ದೇವರಿಗಿಂತಲೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಿದ್ದಾರೆ. ಗುರುಗಳ ಸ್ಮರಣೆ ಮೂಲಕ ಕೃತಜ್ಞತೆ ಅರ್ಪಿಸುವ ಪರ್ವವೇ ಗುರುಪೂರ್ಣಿಮಾ.
ಗುರುಪೂರ್ಣಿಮೆಯನ್ನು ಆನೇಕಲ್‍ನ ಗಡಿ ಭಾಗ ಶಿರಡಿ ಸಾಯಿ ದೇವಾಲಯ ಹಾಗೂ ಸುರಗಜಕ್ಕನಹಳ್ಳಿ ಗೇಟ್ ನ ಬಳಿ ಇರುವ ಸಾಯಿ ಪ್ರಶಾಂತ್ ಲೇಔಟ್ನಲ್ಲಿ ವಿಶೇಷವಾಗಿ ಆಚರಿಸಲಾಯಿತು. ಶ್ರೀ ಶಿರಡಿ ಸಾಯಿ ಬಾಬಾ ಅವರ ಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಾಲಲ್ಲಿ ನಿಂತು ಸಾಯಿಬಾಬಾ ಅವರ ದರ್ಶನ ಪಡೆದು ಕೃತಾರ್ಥರಾದರು.
ಸಾಯಿಬಾಬಾ ಭಜನಾ ಮಂಡಳಿ ಬಾಬಾ ಕುರಿತ ಭಜನೆಯನ್ನು ಹಾಡಿ ನೆರೆದಿದ್ದ ಭಕ್ತರನ್ನು ಭಾವಪರವಶರಾಗುವಂತೆ ಮಾಡಿದರು. ಅಲ್ಲದೇ ಭಕ್ತರಿಂದಲೇ ಸತ್ಯನಾರಾಯಣ ಪೂಜೆ ನಡೆಸುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.