ಬೆಂಗಳೂರು/ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಎಂವಿಜೆ ನರ್ಸಿಂಗ್ ಕಾಲೇಜಿನಲ್ಲಿಂದು ನರ್ಸಿಂಗ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯ್ತು.
ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿಗಳ 12 ನೇ ಘಟಿಕೋತ್ಸವದಲ್ಲಿ ಸುಮಾರು113 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮುಖ್ಯವಾಗಿ ಎಂವಿಜೆಯಲ್ಲಿ 113 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ರಾಜೀವ್ ಗಾಂಧಿ ಹೆಲ್ತ್ ನರ್ಸಿಂಗ್‌ನಲ್ಲೇ ದಾಖಲೆ ಬರೆದಿದ್ದಾರೆ. ಹೀಗಾಗಿ ಅತಿ ಹೆಚ್ಚು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಗೋಲ್ಡ್ ಮೆಡಲ್ ಕೂಡ ನೀಡಿ ಶುಭ ಹಾರೈಸಿದ್ರು.
ಇದರ ಜೊತೆಗೆ ಇದೀಗ ನರ್ಸಿಂಗ್ ವ್ಯಾಸಂಗ ಮಾಡಲು ಆಗಮಿಸಿರುವ 160 ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಇದೇ ವೇಳೆ ನರ್ಸಿಂಗ್ ಮುಗಿಸಿ ಹೊರ ಹೋಗುತ್ತಿರೋ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಮುಂದಿನ ಅವರ ಹಕ್ಕು- ಬಾಧ್ಯತೆಗಳೇನು ಎನ್ನುವುದರ ಕುರಿತು ಗಣ್ಯರು ಮನವರಿಕೆ ಮಾಡಿಕೊಟ್ಟರು. ಈ ವೇಳೆ ಕಾಲೇಜು ಮುಖ್ಯಸ್ಥ ಮೋಹನ್ ಉಪಸ್ಥಿತರಿದ್ದರು.
ಮೆಡಿಸಿಂಕ್ ಹೆಲ್ತ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ಡಾ. ನಾಗೇಂದ್ರ ಸ್ವಾಮೀಜಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ವೈದ್ಯರಷ್ಟೇ ದಾದಿಯರ ಪಾತ್ರವೂ ಪ್ರಮುಖವಾಗಿದೆ ಎಂದರು. ಫ್ಲಾರೆನ್ಸ್ ನೈಟಿಂಗೇಲ್‌ರ 200ನೇ ಜನ ದಿನಾಚರಣೆಯನ್ನು ವರ್ಷವಿಡಿ ಆಚರಿಸುತ್ತಿರುವುದು ದಾದಿಯರಿಗೆ ಸಂದ ಗೌರವವಾಗಿದೆ. ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ರೋಗಿಗಳ ವಿಶ್ವಾಸ ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ ಪೋಷಕರು ಶಿಕ್ಷಕರ ಬಗ್ಗೆ ಕೃತಜ್ಞತಾ ಭಾವನೆ ಹೊಂದಿ ಸಂಸ್ಥೆ ಬಗ್ಗೆಯೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಇದೇ ವೇಳೆ ಕಾಲೇಜಿನ ಸಿಇಓ ಧರಣಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಯಾವುದೇ ಭಾಗದಲ್ಲಿ ಹೋಗಿ ಕೆಲಸ ಮಾಡಲು ಸಮರ್ಥರಿದ್ದಾರೆ. ಅವರಿಗೆಲ್ಲರಿಗೂ ಒಳ್ಳೆಯದಾಗಲಿದೆ ಎಂದು ಶುಭ ಹಾರೈಸಿದರು.