ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುವ ವೇಳೆ ಮಹಿಳಾ ಪ್ರಯಾಣಿಕರೊಬ್ಬರು 4.5 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕಂಡಕ್ಟರ್ಗೆ ಆಧಾರ್ ಕಾರ್ಡ್ ತೋರಿಸಲೆಂದು ವ್ಯಾನಿಟ್ ಬ್ಯಾಗ್ ಓಪನ್ ಮಾಡಿದ್ದ ಮಹಿಳಾ ಪ್ರಯಾಣಿಕರು, ಬಸ್ನಿಂದ ಇಳಿದು ವ್ಯಾನಿಟ್ ಬ್ಯಾಗ್ ನೋಡಿದಾಗ ಚಿನ್ನಾಭರಣ ಕಳ್ಳತನ ಆಗಿರುವುದು ತಿಳಿದಿದೆ.
ದೊಡ್ಡಬಳ್ಳಾಪುರ ತಾಲೂಕಿನ ನೆಲ್ಲುಕುಂಟೆ ಗ್ರಾಮದ ನಿವಾಸಿ ಪುಷ್ಪಾವತಿ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಮಹಿಳೆ. ಉಡುಪಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದ ಅವರು, ಮದುವೆ ಮುಗಿಸಿಕೊಂಡು ನವೆಂಬರ್ 6 ರಂದು ಮನೆಗೆ ವಾಪಸ್ ಆಗುತ್ತಿದ್ದರು. ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದರು. ಉಚಿತ ಪ್ರಯಾಣದ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ಅನ್ನು ಕಂಡಕ್ಟರ್ಗೆ ತೋರಿಸಲು, ಪುಷ್ಪಾವತಿ ಅವರು ವ್ಯಾನಿಟಿ ಬ್ಯಾಗ್ ಓಪನ್ ಮಾಡಿದ್ದರು. ನಂತರ ಆಧಾರ ಕಾರ್ಡ್ ತೋರಿಸಿ ಮತ್ತೆ ಬ್ಯಾಗ್ನಲ್ಲಿಟ್ಟು, ಬಸ್ನಲ್ಲಿಯೇ ಕೆಲ ಕ್ಷಣ ನಿದ್ದೆಗೆ ಜಾರಿದ್ದರಂತೆ.
ಬಸ್ನಿಂದ ಇಳಿದು ವ್ಯಾನಿಟ್ ಬ್ಯಾಗ್ ನೋಡಿದಾಗ ಸುಮಾರು 33 ಗ್ರಾಂ ಚಿನ್ನದ ಲಾಂಗ್ ಚೈನ್, 31 ಗ್ರಾಂ ನೆಕ್ಲೆಸ್, 10 ಗ್ರಾಂ ವಾಲೆ ಜುಮುಕಿ, 8 ಗ್ರಾಂ ಮಾಟಿ, 3 ಗ್ರಾಂನ ಎರಡು ಚಿನ್ನದ ಉಂಗುರಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಚಿನ್ನಾಭರಣ ಕಳವಾಗಿರುವ ವಿಷಯ ಗಂಡನಿಗೆ ತಿಳಿದರೆ ಬೈಯುತ್ತಾರೆ ಎನ್ನುವ ಭಯದಲ್ಲಿ ಅವರು ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 4.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಸ್ನಲ್ಲಿಯೇ ಕದಿಯಲಾಗಿದೆ ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಪುಷ್ಪಾವತಿ ಅವರದ್ದು ನಾಲ್ಕು ಮಂದಿ ಹೆಣ್ಣು ಮಕ್ಕಳಿರುವ ಕುಟುಂಬ, ಗಂಡ ಅಡುಗೆ ಕೆಲಸ ಮಾಡುತ್ತಾರೆ. ಅಡುಗೆ ಕೆಲಸದಲ್ಲಿ ಬರುವ ಹಣದಲ್ಲಿ ಆಭರಣಗಳನ್ನು ಮಾಡಿಸಿದ್ದರು. ಇದೇ ಆಭರಣಗಳು ಅವರ ಜೀವನಕ್ಕೆ ಆಧಾರವಾಗಿದ್ದವು. ಈಗ ಎಲ್ಲವನ್ನು ಕಳೆದುಕೊಂಡಿರುವುದು ಅವರ ನೋವಿಗೆ ಕಾರಣವಾಗಿದೆ. ಕಳ್ಳತನವಾಗಿರುವ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಾಲೀಕರ ಮನೆಯಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ