ದೊಡ್ಡಬಳ್ಳಾಪುರ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೂ ಇದು ಜಾರಿಯಲ್ಲಿರಲಿದೆ.
ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನಲೆ ಇಂದಿನಿಂದ ಮೇ 3ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ.
ಕೊರೊನಾ ಜಾಗೃತಿ ಅಭಿಯಾನ: ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ಕೊರೊನಾ ಜಾಗೃತಿ ಅಭಿಯಾನ ಮಾಡಲಾಗಿತ್ತು. ಕೇಂದ್ರ ವಲಯದ ಐಜಿಪಿ ಎಂ.ಚಂದ್ರಶೇಖರ್, ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ಸಮಯದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಮತ್ತು ಸ್ವಯಂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ಕೋವಿಡ್ -19 ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಮಾಸ್ಕ್ ಧರಿಸದ 16,241 ಪ್ರಕರಣಗಳು, ಸಾಮಾಜಿಕ ಅಂತರ ಕಾಪಾಡದ 1,176 ಪ್ರಕರಣಗಳು ದಾಖಲಾಗಿದ್ದು, ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ -2020 ಅಡಿಯಲ್ಲಿ 54 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.