ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಸಮಯದಲ್ಲಿ ಸಿ ಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಸಂವಿಧಾನ ವಿರೋಧಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಛಲವಾಧಿ ಮಹಾಸಭಾದ ದಲಿತ ಮುಖಂಡ ಲಕ್ಷ್ಮೀಪತಿ ಈ ಕುರಿತು ಮಾತನಾಡಿ, ನ. 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ವೇಳೆ ಖಾಸಗಿ ವಾಹಿನಿಗೆ ಕುಮಾರಸ್ವಾಮಿ ಚುಟುಕು ಸಂದರ್ಶನ ನೀಡಿದ್ದರು. ಈ ವೇಳೆ ಪತ್ರಕರ್ತರು ಜೆಡಿಎಸ್ ನಾಯಕ ಇಬ್ರಾಹಿಂ ಅವರು ಮುಖ್ಯಮಂತ್ರಿ ಆಗುವರೇ ಎಂಬ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರ ನೀಡುವ ಸಮಯದಲ್ಲಿ ಹೆಚ್ಡಿಕೆ ಅವರು ಸಿ ಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಪದ ಬಳಕೆ ಮಾಡಿದ್ದರು. ಇದು ಕಾನೂನು ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.
ಸಂವಿಧಾನ ವಿರೋಧಿ ಅಸ್ಪೃಶ್ಯತೆ : ಇಂಥ ಹೇಳಿಕೆ, ಸಂವಿಧಾನ ವಿರೋಧಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದನ್ನು ಸಾಬೀತು ಮಾಡಿದೆ. ಜೆಡಿಎಸ್ ಪಕ್ಷದ ಜಾತ್ಯಾತೀತ ಪದ ತೆಗೆದು ಜಾತಿವಾದಿ ಜೆಡಿಎಸ್ ಪಕ್ಷವೆಂದು ಹೆಸರು ಬದಲಾಯಿಸಿಕೊಳ್ಳಲಿ. ಕುಮಾರಸ್ವಾಮಿಯವರ ಅವಹೇಳನಕಾರಿ ಹೇಳಿಕೆ ಕಾನೂನು ಬಾಹಿರವಾಗಿದೆ, ಅವರು ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಅಲ್ಲದೆ ಹೆಚ್ ಡಿಕೆ ವಿರುದ್ಧ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:ರೆಸಾರ್ಟ್ನಲ್ಲಿ ಹೊರ ರಾಜ್ಯಗಳ 500ಕ್ಕೂ ಹೆಚ್ಚು ಕಾರ್ಮಿಕರು; ಅಸಭ್ಯ ವರ್ತನೆಗೆ ಸ್ಥಳೀಯರ ಆತಂಕ