ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ನೀಡಿದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನಾನು ಈ ಪ್ರಕರಣದ ಬಗ್ಗೆ ಚರ್ಚೆಯೇ ಮಾಡಿಲ್ಲ. ಇದರಲ್ಲೂ ನನ್ನ ಹೆಸರು ಬರುತ್ತಿದೆ ಎಂದರೆ ಅದು ನನ್ನ ಮೇಲಿನ ಭಯದಿಂದಲೇ ಆಗಿದೆ. ಎಲ್ಲರಿಗೂ ನನ್ನ ಮೇಲೆ ಇರುವ ಭಯದಿಂದ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ವಿದೇಶ ಪ್ರವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ, ಭಾನುವಾರ ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾತ್ರಿ 12.50ಕ್ಕೆ ಕೌಲಾಲಂಪುರದಿಂದ ಮಲೇಷ್ಯಾ ಏರ್ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಬಂದಿಳಿದರು. ಕಳೆದ ಎಂಟು ದಿನಗಳಿಂದ ಪಕ್ಷದ ಕೆಲ ಮುಖಂಡರ ಜೊತೆ ಕುಮಾರಸ್ವಾಮಿ ಕಾಂಬೋಡಿಯಾ ಪ್ರವಾಸ ಕೈಗೊಂಡಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯಪಾಲರಿಗೆ ಪತ್ರ ಬರೆದಿರುವ ಹಿಂದೆ ನಿಮ್ಮ ಪಾತ್ರವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸದ್ಯ ತನಿಖೆ ಮಾಡಲಾಗುತ್ತಿದೆ. ತನಿಖೆ ಮೂಲಕ ಸರ್ಟಿಫಿಕೆಟ್ ತೆಗೆದುಕೊಳ್ಳಬೇಕೆಂಬುದು ಇದರ ಉದ್ದೇಶವಾಗಿದೆ. ಮೊದಲು ಪ್ರಾಮಾಣಿಕವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಲಿ. ಇಂತಹ ಪ್ರಕರಣಗಳಿಗೆ ಅವಕಾಶ ನೀಡದೇ, ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ವಿದೇಶ ಪ್ರವಾಸದ ಬಗ್ಗೆ ಟೀಕೆಗೆ ತಿರುಗೇಟು: ಕುಮಾರಸ್ವಾಮಿ ವಿದೇಶದಲ್ಲೇ ಇರಲಿ, ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಕೆಲವರು ಹೇಳಿದ್ದನ್ನು ಗಮನಿಸಿದ್ದೇನೆ. ಆದರೆ, ನಾನು ವಿದೇಶಕ್ಕೆ ಯಾರಪ್ಪನ ದುಡ್ಡಿನಿಂದ ಹೋಗಿಲ್ಲ. ನಮಗೂ ಹಣ ಖರ್ಚು ಮಾಡಿಕೊಂಡು ವಿದೇಶಕ್ಕೆ ಹೋಗುವ ಯೋಗ್ಯತೆ ಇದೆ. ಯಾವುದೋ ಪಾಪದ ಹಣದಿಂದ ಹೋಗಬೇಕಾದ ಪರಿಸ್ಥಿತಿ ಇಲ್ಲ. ಕಾಂಬೋಡಿಯಾದ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದೆವು ಎಂದು ಹೆಚ್ಡಿಕೆ ಟಾಂಗ್ ನೀಡಿದರು.
ಮಧ್ಯಪ್ರದೇಶದಲ್ಲಿಯೂ 50% ಸರ್ಕಾರ ಅಂತಾ ಬಿಜೆಪಿ ಮೇಲೆ ಕಾಂಗ್ರೆಸ್ ಆರೋಪ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ ಮಾಡುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಹೊರಟಿವೆ. ಅವರಿಗೆ ದೇಶದ ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಬೇಕಿಲ್ಲ. ಲೂಟಿ ಹೊಡೆಯುವ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ರೀತಿಯ ವಾತಾವರಣ ನಮ್ಮ ದೇಶದಲ್ಲಿದೆ ಎಂದರು.
ಹಲವಾರು ಬಡತನದಲ್ಲಿದ್ದ ದೇಶಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದನ್ನು ನಾವು ಜಗತ್ತಿನಲ್ಲಿ ನೋಡುತ್ತಿದ್ದೇವೆ. ಬೇರೆ ದೇಶಗಳಿಗೂ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಯನ್ನು ನೋಡುವ ಸಂಬಂಧ ಸದ್ಯ ಸಿಕ್ಕಿರುವ ಅಲ್ಪ ಸಮಯವನ್ನು ಉಪಯೋಗ ಮಾಡುತ್ತಿದ್ದೇನೆ. ಅಲ್ಲಿನ ಪ್ರಗತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡೆ ಎಂದ ಕುಮಾರಸ್ವಾಮಿ, ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ವಿದೇಶಗಳಿಗೆ ಪ್ರವಾಸ ತೆರಳುವ ಮೂಲಕ ಅಲ್ಲಿನ ಅಭಿವೃದ್ಧಿ ಅಧ್ಯಯನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ಸೇರಿದಂತೆ ಪಕ್ಷದ ಇತರ ಮುಖಂಡರು ಇದ್ದರು.
ಇದನ್ನೂ ಓದಿ: C T Ravi: ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ