ದೊಡ್ಡಬಳ್ಳಾಪುರ: 15 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಮಗನ ಕನವರಿಕೆಯಲ್ಲೇ ತಂದೆ ಬದುಕು ಸಾಗಿಸುತ್ತಿದ್ದಾರೆ. ಒಮ್ಮೆ ಮಗನ ಮುಖ ನೋಡಿದರೆ ಸಾಕು, ಸಾಯುವ ಜೀವಕ್ಕೆ ನೆಮ್ಮದಿ ಸಿಗುತ್ತೆ ಅನ್ನೋದು ಅವರ ಮಹದಾಸೆ. ತಾಯಿಯೂ ಮಗನ ಬರುವಿಕೆಗಾಗಿ ದಿನನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಇದು ದೊಡ್ಡಬಳ್ಳಾಪುರದ ನಿವಾಸಿಗಳಾದ ಪೋಷಕರ ಕರುಣಾಜನಕ ಕಥೆ.
ವಿವರ: ಅನಾರೋಗ್ಯದಿಂದ ಬಳಲುತ್ತಿರುವ ಅಂದಾಜು 70 ವರ್ಷದ ರಾಮಕೃಷ್ಣಪ್ಪ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿರುವ ಇವರು ಮಗನ ಹೆಸರು ಕರೆದಾಗ ಮಾತ್ರವೇ ಸ್ಪಂದಿಸುತ್ತಿದ್ದಾರೆ.
ರಾಮಕೃಷ್ಣಪ್ಪ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ನಿವಾಸಿ. ಇವರಿಗೆ ವೇಣುಗೋಪಾಲ್ ಎಂಬ ಮಗನಿದ್ದ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಜೀವನದಲ್ಲೇನಾದರೂ ಸಾಧನೆ ಮಾಡಬೇಕೆಂದು 15 ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದನಂತೆ. ಹೀಗೆ ಮನೆ ಬಿಟ್ಟು ಹೋದಾಗ ಆತನಿಗೆ 22 ವರ್ಷ ಪ್ರಾಯ. ಆದರೆ ಅಲ್ಲಿಂದ ಇಲ್ಲಿಯತನಕ ವೇಣುಗೋಪಾಲ್ ಮತ್ತೆ ಮನೆಗೆ ಬರಲೇ ಇಲ್ಲ. ಆತನ ಸುಳಿವೂ ಇಲ್ಲ. ಮಗನ ಪತ್ತೆಗಾಗಿ ತಮ್ಮಿಂದಾಗುವ ಪ್ರಯತ್ನವನ್ನೂ ಪೋಷಕರು ಮಾಡಿದ್ದಾರೆ. ಆದರೆ ಈ ಪ್ರಯತ್ನಗಳಿಗೆ ಈವರೆಗೂ ಯಾವುದೇ ಫಲ ಸಿಕ್ಕಿಲ್ಲ.
ಇದೀಗ ರಾಮಕೃಷ್ಣಪ್ಪ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಹಾಸಿಗೆಯಲ್ಲಿ ಮಗನನ್ನೇ ಕನವರಿಸುವುದು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ. ಸಾಯುವ ಕೊನೆಗಳಿಗೆಯಲ್ಲಾದರೂ ಒಮ್ಮೆ ಮಗನ ಮುಖ ನೋಡಬೇಕೆಂಬುದು ಅವರ ಆಸೆ. ಆದರೆ ಆತ ಎಲ್ಲಿದ್ದಾನೆ ಎಂಬ ಸುಳಿವಿಲ್ಲ. ವೇಣುಗೋಪಾಲ್ ತಾಯಿ ರತ್ನಮ್ಮ ಮತ್ತು ಅಕ್ಕ ಸವಿತಾ ವಿಡಿಯೋ ಮುಖಾಂತರ ಮನೆಗೆ ಬರುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ವೇಣುಗೋಪಾಲ್ ಎಲ್ಲೇ ಇದ್ದರೂ, ಹೇಗೇ ಇದ್ದರೂ ಬೇಗ ಆಸ್ಪತ್ರೆಗೆ ಬಾ ಎಂದು ಕಣ್ಣೀರಿಟ್ಟು ಗೋಗರೆಯುತ್ತಿದ್ದಾರೆ. ಒಮ್ಮೆ ಮಗನ ಮುಖ ನೋಡಿದರೆ ರಾಮಕೃಷ್ಣಪ್ಪ ನೆಮ್ಮದಿಯಿಂದ ಕೊನೆಯುಸಿರೆಳೆಯುತ್ತಾರೆಂಬ ಸಣ್ಣ ಆಸೆ ಕುಟುಂಬಸ್ಥರದ್ದು.
ವೇಣುಗೋಪಾಲ್ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಪೋಷಕರು ಮನವಿ ಮಾಡಿದ್ದಾರೆ. ಸಂಪರ್ಕ ವಿವರಗಳು ಹೀಗಿವೆ.
ರವಿರಾಜ್ -9113011791
ರಮೇಶ್ -7760874762
ಸುರೇಶ್ - 9945845483
ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಆಫ್ರಿಕಾದಲ್ಲಿ ಗಿಡಮೂಲಿಕೆ ಮಾರುವ ಹಕ್ಕಿಪಿಕ್ಕಿಗಳು: ಇವರಿಗಿವೆ ಹಲವು ಸವಾಲು