ದೊಡ್ಡಬಳ್ಳಾಪುರ: ಮಗನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದ ತಂದೆ ಆಯತಪ್ಪಿ ಹೊಟೇಲ್ನ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ಪಕ್ಕದ ಸಂಮೃದ್ಧಿ ಗ್ರ್ಯಾಂಡ್ ಹೊಟೇಲ್‌ನಲ್ಲಿ ಘಟನೆ ನಡೆದಿದೆ.

ಮಂಜುನಾಥ್ (65) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರು ದಕ್ಷಿಣ ತಾಲೂಕಿನ ಎಲೇಕೊಡಿಗೇನಹಳ್ಳಿ ನಿವಾಸಿಯಾಗಿದ್ದಾರೆ.
ಮೃತರ ಪುತ್ರ ದರ್ಶನ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯ ಶಿಲ್ಪಾ ಎಂಬುವರ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು. ಹೊಟೇಲ್ನ ಮೂರನೇ ಮಹಡಿಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಾಡಾಗಿತ್ತು. ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಹುಡುಗನ ತಂದೆ ಮಂಜುನಾಥ್ ಮೂರನೇ ಮಹಡಿಯಿಂದ ಆಯತಪ್ಪಿ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಜುನಾಥ್ ಸಾವಿಗೆ ಹೊಟೇಲ್ ಮಾಲೀಕರ ನಿರ್ಲಕ್ಷ್ಯತೆ ಕಾರಣವೆಂದು ಹೇಳಲಾಗಿದೆ. ಕೆಲವು ದಿನಗಳಿಂದ ಮೂರು ಮಹಡಿಗಳಿಗೆ ಲಿಫ್ಟ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಮೆಟ್ಟಿಲು ಬಳಿಯೇ ಲಿಫ್ಟ್ ಅಳವಡಿಸಲಾಗಿತ್ತು. ಲಿಫ್ಟ್ ಬಳಿ ತಡೆಗೋಡೆ ಅಳವಡಿಸದೆ ಇದ್ದದ್ದು, ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ದೆಹಲಿಗೆ ವಾಪಸಾದ್ರು ಅರುಣ್ ಸಿಂಗ್; ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಿಎಂಗೆ ನಿರಾಶೆ