ದೊಡ್ಡಬಳ್ಳಾಪುರ : ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಪೆರೇಡ್ ರೀತಿಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ಮಾಡುವ ಮೂಲಕ ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಇದೀಗ ಗಣರಾಜ್ಯೋತ್ಸವ ದಿನವೇ ಬೆಂಗಳೂರಿನಲ್ಲಿ ಟ್ಯಾಕ್ಟರ್ ರ‍್ಯಾಲಿ ನಡೆಸಲು ರೈತ ಸಂಘಟನೆ ಮುಂದಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಂಗಳೂರು ನಗರಕ್ಕೆ 3 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಲಗ್ಗೆ ಇಡಲಿವೆ.
ಈ ಕುರಿತು ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಗಣರಾಜ್ಯೋತ್ಸವ ದಿನದಂದು ನೆಲಮಂಗಲದ ನೈಸ್ ರೋಡ್ ಜಂಕ್ಷನ್ನಿಂದ ರೈತರ ಜಾಥಾ ಪ್ರಾರಂಭವಾಗಲಿದೆ.ಉತ್ತರ ಕರ್ನಾಟಕ ಮತ್ತು ಪಶ್ಚಿಮ ಕರ್ನಾಟಕದ ಜಿಲ್ಲೆಗಳಿಂದ ಬರುವ ರೈತರು ಈ ಸ್ಥಳದಲ್ಲಿ ಸೇರಲಿದ್ದಾರೆ. ಗಣರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿಗಳ ಭಾಷಣ ಮುಗಿದ ನಂತರ ಟ್ರ್ಯಾಕ್ಟರ್ ರ‍್ಯಾಲಿ ಆರಂಭವಾಗುತ್ತದೆ. ಟ್ರ್ಯಾಕ್ಟರ್ಗಳಲ್ಲಿ ರಾಷ್ಟ್ರ ಧ್ವಜ ಮತ್ತು ಹಸಿರು ಧ್ವಜವನ್ನು ಹಾಕಿಕೊಳ್ಳಲಿದ್ದಾರೆ. ನೈಸ್ ರೋಡ್ನಿಂದ ಯಶವಂತಪುರ ಮಾರ್ಗವಾಗಿ ಸರ್ಕಲ್ ಮಾರಮ್ಮ, ಮಲ್ಲೇಶ್ವರಂ, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್, ಆನಂದ್ ರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ರೈತರು ಸೇರಲಿದ್ದಾರೆ. ಇಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಇರಲಿದ್ದಾರೆ.
ದೇಶ ಖಾಸಗಿ ಕಂಪನಿಗಳ ಆಸ್ತಿಯಾಗ್ತಿದ್ದು, ಅದನ್ನ ಉಳಿಸಿಕೊಳ್ಳುವ ಹಾಗೂ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಸರ್ಕಾರಿ ಸೌಮ್ಯದ ಗಣಿಗಾರಿಕೆಯನ್ನ ಖಾಸಗಿಯವರಿಗೆ ಕೊಟ್ಟಾಗ ಯಾರು ಚಕಾರ ಎತ್ತಿಲ್ಲ. ವಿರೋಧ ಪಕ್ಷಗಳು ಟೀಕೆ ಮಾಡಿವೆ. ದೇಶದ ವಿಮಾನ ನಿಲ್ದಾಣಗಳು ಖಾಸಗೀಕರಣವಾದಾಗಲು ಸಹ ಜನ ವಿರೋಧಿಸಲಿಲ್ಲ. ಇದರಿಂದ ಬಂಡವಾಳಶಾಯಿಗಳು ಟಾರ್ಗೆಟ್ ಕೃಷಿ ಕ್ಷೇತ್ರ ಮತ್ತು ಕೃಷಿ ಮಾರುಕಟ್ಟೆಯಾಗಿದೆ. ದೇಶದ 80 ರಷ್ಟು ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಶೇಕಡಾ 75 ರಷ್ಟು ಉತ್ಪನ್ನಗಳು ಕೃಷಿಯಿಂದ ಬರುತ್ತವೆ. ದೇಶದ ಜನರು ಕೃಷಿಯಿಂದ ಸುಂದರ ಜೀವನ ಕಂಡುಕೊಂಡಿದ್ದಾರೆ. ಇವರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ಕಾರಣಕ್ಕೆ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರು ಕೃಷಿ ಕಾಯ್ದೆ ಜಾರಿಗೆ ತಂದಿದೆ. ಇದೀಗ ಬೇರೆ ಅಂಜೆಡಾ ಇಟ್ಟುಕೊಂಡು ರೈತರ ಹಾದಿ ತಪ್ಪಿಸುವ ಕೆಲಸವನ್ನ ಕೇಂದ್ರ ಮಾಡ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.