ದೊಡ್ಡಬಳ್ಳಾಪುರ : ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಆರಂಭದಿಂದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಸೇರಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ, ಬೆಂಗಳೂರು ಗ್ರಾಮಾಂತ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂಪರ್ಕ ಸೇವೆ ರದ್ದು ಮಾಡಿ ಆನ್‌ಲೈನ್ ಸೇವೆ ಕಡ್ಡಾಯ ಮಾಡಲಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಈ ಸೌಲಭ್ಯದಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ನೇರ ಪತ್ರ ವ್ಯವಹಾರಕ್ಕೆ ಬ್ರೇಕ್ ಹಾಕಿರುವ ಸರ್ಕಾರ ಆನ್‌ಲೈನ್ ಸೇವೆಗೆ ಮುಂದಾಗಿದೆ. ಇದಕ್ಕಾಗಿ ಕಾವೇರಿ ಸಾಫ್ಟ್‌ವೇರ್‌ನ ಸಿದ್ಧಪಡಿಸಿದೆ. ಆದರೆ, ಸರ್ವರ್ ಸಮಸ್ಯೆಯಿಂದ ರೈತರು ಹೈರಾಣಾಗುತ್ತಿದ್ದಾರೆ. ರೈತರು ಬ್ಯಾಂಕ್‌ನಿಂದ ಸಾಲ ಪಡೆಯ ಬೇಕಾದ್ರೆ ಋಣಮುಕ್ತ ಪತ್ರ (ಇಸಿ) ನೀಡಬೇಕು. ಈ ಪತ್ರ ಸಿಗುವುದು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ. ಕೋವಿಡ್‌ನಿಂದ ಮ್ಯಾನುವಲ್ ಸೇವೆ ರದ್ದು ಮಾಡಿರುವುದರಿಂದ ರೈತರಿಗೆ ಭಾರಿ ಸಮಸ್ಯೆಯಾಗಿದೆ ಎನ್ನುತ್ತಾರೆ ರೈತ ಮಧು.
ರೈತರು ಸೇರಿ ಸರ್ಕಾರಿ ನೇಕಾರರು ಸಹ ಸಾಲ ಪಡೆಯ ಬೇಕಾದರೆ ಬ್ಯಾಂಕ್‌ಗಳಿಗೆ ಋಣಮುಕ ಪತ್ರ ಸಲ್ಲಿಸಬೇಕು. ಈ ಹಿಂದೆ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಋಣಮುಕ್ತ ಪತ್ರ ಕೈ ಸೇರುತ್ತಿತ್ತು. ಆದರೆ, ಆನ್‌ಲೈನ್ ಮಾಡಿದ ಬಳಿಕ ಸರ್ವರ್ ಸಮಸ್ಯೆಯಿಂದ ಋಣಮುಕ್ತ ಪತ್ರ ಪಡೆಯೋದು ಕಷ್ಟವಾಗಿದೆ. ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನವೆಲ್ಲಾ ಕಾದರೂ ಒಂದೋ ಎರಡೋ ಋಣಮುಕ್ತ ಪತ್ರ ಸಿಗುತ್ತದೆ.
ಇದರಿಂದ ರೈತರು ಸೈಬರ್ ಸೆಂಟರ್‌ಗಳತ್ತ ಮುಖ ಮಾಡಿದ್ದಾರೆ. ಪೂರಕ ಮಾಹಿತಿ ಕೊಟ್ಟು 100 ರೂ. ಕೊಟ್ಟರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮುಂಗಾರು ಶುರುವಾಗಿದ್ದು ರೈತರಿಗೆ ಹಣದ ಅವಶ್ಯಕತೆ. ಜೂನ್ 15ರ ನಂತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.