ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ರಾಜ್ಯಾದ್ಯಂತ ನಿನ್ನೆ (ಭಾನವಾರ) ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಅವಾಂತರ ಸೃಷ್ಟಿ ಆಗಿದ್ದು, ಆನೇಕ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣ ನೆಲೆಕಚ್ಚಿವೆ. ಇಷ್ಟಕ್ಕೆ ನಿಲ್ಲದ ವರುಣಾನ ಆರ್ಭಟ 7 ಮಂದಿಯನ್ನು ಬಲಿ ಪಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಹೀರೆಕಾಯಿ, ಹೂಕೋಸು, ಶಾಮಂತಿಗೆ ಹೂ ತೋಟ ಸಂಪೂರ್ಣ ನಾಶವಾಗಿರುವ ಘಟನೆ ಭಾನುವಾರ ನಡೆದಿದೆ. ಗ್ರಾಮದ ರೈತ ರವಿಚಂದ್ರ ಎಂಬುವವರು ತನ್ನ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೀರೇಕಾಯಿ, ಹೂಕೋಸು, ಶಾವಂತಿಗೆ ಹೂ ತೋಟ ಸಂಪೂರ್ಣ ನಾಶವಾಗಿದೆ.
ತೋಟದಲ್ಲಿನ ಹೀರೇಕಾಯಿ ಗಿಡಗಳು ಹೂ ಬಿಟ್ಟು ಇನ್ನೇನು ಕೆಲವೇ ದಿನಗಳಲ್ಲಿ ಫಸಲು ನಿರೀಕ್ಷೆಯಲ್ಲಿದ್ದ ರೈತ ರವಿಚಂದ್ರ ಜೀವನಕ್ಕೆ ರಾತ್ರಿ ಸುರಿದ ಮಳೆ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತನಿಗೆ ಸುಮಾರು ಐದು ಲಕ್ಷ ರೂಪಾಯಿ ಬೆಳೆ ನಷ್ಟವಾಗಿದೆ. ಸಾಲ ಮಾಡಿ ತೋಟ ಮಾಡಿದ್ದೆ, ಹೂ ಬಿಟ್ಟು ಫಲವತ್ತಾದ ಬೆಳೆ ಕೈ ಸೇರುವಷ್ಟರಲ್ಲಿ ಮಳೆ ಬಿದ್ದು ಸಂಪೂರ್ಣ ತೋಟ ನಾಶವಾಗಿದೆ ಎಂದು ರೈತ ರವಿಚಂದ್ರ ಅಳಲು ತೋಡಿಕೊಂಡಿದ್ದಾರೆ.
ಬಿರುಗಾಳಿಗೆ ಹಾರಿ ಹೋದ ಮನೆಯ ಮೇಲ್ಚಾವಣಿ : ಬಿರುಗಾಳಿ ಸಹಿತ ಸುರಿದ ಭಯಂಕರ ಮಳೆಗೆ ಮನೆಯ ಮೇಲ್ಚಾವಣಿಯ ಶೀಟುಗಳು ಹಾರಿಹೊದ ಘಟನೆ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಕಾಂತರಾಜು, ಪ್ರಭಾಕರ್, ಮುನಿರಾಜು ಸೇರಿದಂತೆ ಹಲವರ ಮನೆಗಳ ಶೀಟುಗಳು ಹಾರಿ ಹೋಗಿವೆ. ಪರಿಣಾಮ ಗೋಡೆ ಕೂಡ ಕುಸಿದಿದ್ದು, ಮನೆಯಲ್ಲಿನ ಪಾತ್ರೆ ಸಾಮಗ್ರಿಗಳು ನಜ್ಜುಗುಜ್ಜಾಗಿರುವುದು ಕಂಡು ಬಂದಿದೆ.
ಧಾರಾಕಾರವಾಗಿ ಸುರಿದ ಮಳೆಯ ನೀರೆಲ್ಲ ಮನೆಯೊಳಗೆ ನುಗ್ಗಿ ವಸ್ತುಗಳಿಗೆ ಹಾನಿಯಾಗಿದೆ, ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮತ್ತೊದೆಡೆ ಜಿಂಕೆಬಚ್ಚಹಳ್ಳಿ ಗ್ರಾಮದ ಹಾಲಿನ ಡೇರಿ ಬಳಿ ಬೃಹತ್ ಮರವೊಂದು ಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಗಂಗಾವತಿಯಲ್ಲಿ ಬಾಳೆತೋಟಕ್ಕೆ ಹಾನಿ : ನಗರ ಸೇರಿದಂತೆ ತಾಲೂಕಿನಾದ್ಯಂತ ನಿನ್ನೆ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಆನೆಗೊಂದಿ ಹಾಗೂ ಚಿಕ್ಕಜಂತಕಲ್ ಭಾಗದಲ್ಲಿನ ಬಾಳೆತೋಟಕ್ಕೆ ಹಾನಿಯಾಗಿದೆ. ಜೊತೆಗೆ ತಾಲೂಕಿನ ಸಂಗಾಪುರ, ಮಲ್ಲಾಪುರ, ಗೂಗಿಬಂಡೆ ಕ್ಯಾಂಪ್, ಕಾರಟಗಿ ತಾಲೂಕಿನ ಈಳಿಗೆನೂರು, ಜಮಾಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ತಗಡು-ಶೀಟ್ ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕನಕಗಿರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ತರಕಾರಿ ವ್ಯಾಪಾರಿ ವೆಂಕಣ್ಣ ಯರಗಟ್ಟಿ ಎಂಬುವವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಬಳಿಕ ಮರವನ್ನು ತೆರವು ಮಾಡಲಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಅಧಿಕ ತಾಪಮಾನವಿದ್ದು, ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ಕೊಂಚ ತಂಪಾಗಿದೆ.
ಗಂಗಾವತಿಯಲ್ಲಿ ಅತ್ಯಧಿಕ 33.6 ಮಿ.ಮೀ ಮಳೆಯಾಗಿದೆ. ಮರಳಿಯಲ್ಲಿ 27.2 ಮಿ.ಮೀ ಹಾಗೂ ವೆಂಕಟಗಿರಿಯಲ್ಲಿ 11.6 ಮಿಲ್ಲಿ ಮೀಟರ್ ಮಳೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗಾವತಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಮಳೆಯಿಂದಾಗಿ ಅಲ್ಲಲ್ಲಿ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ. ನಮ್ಮ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಳೆ ಅವಾಂತರದಿಂದ ಚಾಮರಾಜನಗರದಲ್ಲಿ ಅಪಾರ ಬೆಳೆ ಹಾನಿ : ಸಂಜೆಯಿಂದ ರಾತ್ರಿವರೆಗೆ ಸುರಿದ ಬಿರುಗಾಳಿ ಸಹಿತ ಮಳೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದು, ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲಿ 2 ಗಂಟೆಗೂ ಅಧಿಕ ಮಳೆಯಾಗಿದ್ದು, ಹಲವೆಡೆ ರಸ್ತೆಗಳಿಗೆ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು.
ಹನೂರು ಪಟ್ಟಣದ ಬಾಲು ಎಂಬುವವರ ಮನೆ ಮೇಲೆ ಇರುವ ನೀರಿನ ಟ್ಯಾಂಕ್‌ಗೆ ಮರವೊಂದು ಮುರಿದು ಮೇಲೆ ಬಿದ್ದು ಟ್ಯಾಂಕ್ ಹೊಡೆದು ಹೋಗಿದೆ. ಜೊತೆಗೆ ಮನೆಯ ಮೇಲೆ ಮರಬಿದ್ದಿರುವುದರಿಂದ ಗೋಡೆ ಕುಸಿದು ಬಿದ್ದಿದೆ. ಅಲ್ಲದೇ ಕೆಇಬಿ ಮುಂಭಾಗ ಇರುವ ಬಡಾವಣೆಯೊಂದರ ಕೃಷ್ಣ ನಾಯ್ಡು ಎಂಬುವವರ ಮನೆಯ ಛಾವಣಿ ಗಾಳಿಗೆ ಹಾರಿ ಹೋಗಿದ್ದು, ದಿನಬಳಕೆಯ ವಸ್ತುಗಳು ಮಳೆ ನೀರಿನಿಂದ ನಾಶವಾಗಿವೆ.
ಹನೂರು ತಾಲೂಕಿನ ಹಲವೆಡೆ ಬೆಳೆದಿದ್ದ ಜೋಳ ಗಾಳಿ-ಮಳೆಗೆ ನೆಲಕಚ್ಚಿದೆ. ಗುಂಡ್ಲುಪೇಟೆಯಲ್ಲೂ ಭರ್ಜರಿ ಮಳೆಯಾಗಿದ್ದು ಕೆಬ್ಬೇಪುರ ಗ್ರಾಮದಲ್ಲಿ ಪ್ರಕಾಶ್ ಎಂಬವರು ಬೆಳೆದಿದ್ದ ಬೀನ್ಸ್ ನಾಶವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಚಾಮರಾಜನಗರ ತಾಲೂಕಿನ ಹಲವೆಡೆ ಬಾಳೆಯು ನೆಲಕ್ಕುರುಳಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ : ರಾಜಧಾನಿಯಲ್ಲಿ ಮಳೆ ಅವಾಂತರ: ಮಳೆ ನೀರಲ್ಲಿ ಮುಳುಗಿದ ಜಗ್ಗೇಶ್ BMW ಕಾರು