ನೆಲಮಂಗಲ (ಬೆಂಗಳೂರು ಗ್ರಾಮಾಂತರ): ರೈತರಿಂದ ಸಂಗ್ರಹಿಸಿದ ಹಾಲನ್ನು ಕೂಲರ್ ಕೇಂದ್ರಕ್ಕೆ ಸಾಗಿಸಲಾಗುತ್ತಿದ್ದ ವೇಳೆ ವಾಹನ ಚಾಲಕ ಹಾಲನ್ನು ಕದ್ದು ಅದೇ ಪ್ರಮಾಣದಲ್ಲಿ ನೀರನ್ನು ಬೆರೆಸುತ್ತಿದ್ದ. ಈ ರೀತಿ ಹಾಲು ಕಲಬೆರಕೆ ಮಾಡುತ್ತಿದ್ದವರನ್ನು ಸ್ಥಳೀಯ ರೈತರು ಸಾಕ್ಷಿ ಸಮೇತ ಹಿಡಿದಿದ್ದಾರೆ.
ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿಯ ಬಲ್ಕ್ ಮಿಲ್ಕ್ ಕೂಲರ್ ಕೇಂದ್ರಕ್ಕೆ, ಮಾಚನಹಳ್ಳಿ ಗ್ರಾಮದಿಂದ ಹಾಲು ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಾಲು ಕದ್ದು ಅದೇ ಪ್ರಮಾಣದಲ್ಲಿ ನೀರು ಸೇರಿಸುವಾಗ ರೆಡ್ ಹ್ಯಾಂಡ್ ಆಗಿ ರೈತರ ಕೈಗೆ ವಾಹನ ಚಾಲಕರ ತಂಡ ತಗಲಾಕಿಕೊಂಡಿದ್ದಾರೆ. ಹಾಲಿನ ವಾಹನ ಮಾಲೀಕ ಉಮೇಶ್, ಪ್ರತಿನಿತ್ಯ ಒಂದು ಸರದಿಗೆ 80ಲೀ. ಹಾಲಿಗೆ ನೀರು ಬೆರೆಸಿ ದೋಖಾ ಮಾಡಿ ಲಕ್ಷಾಂತರ ರೂಪಾಯಿ ಹಣ ಮಾಡಿರುವ ಆರೋಪ ಕೇಳಿಬಂದಿದೆ.
ಕದ್ದ ಹಾಲನ್ನು ಸೋಂಪುರ, ಹೊನ್ನೇನಹಳ್ಳಿ ಡೈರಿ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೆಲವು ಅಧಿಕಾರಿಗಳು, ಕೆಂಗಲ್ ಕೆಂಪೋಹಳ್ಳಿ ಡೇರಿಯ ಕಾರ್ಯದರ್ಶಿ ನಾಗರತ್ನಮ್ಮ ಸೇರಿ ಹಲವರು ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಕೇವಲ ಮಾತುಕತೆ ಮೂಲಕ ವ್ಯವಹಾರ ಮಾಡಿ ಆರೋಪಿಯನ್ನು ಮನೆಗೆ ಕಳುಹಿಸಿದ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಸ್ಥಳದಲ್ಲೇ ಎರಡು ಲಕ್ಷ ದಂಡ ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ಫಿಶ್ ಫೀಡಿಂಗ್ ಫುಡ್ ತಯಾರಿಕಾ ಘಟಕದಲ್ಲಿ ಸತ್ತ ಜಾನುವಾರುಗಳ ಬಳಕೆ ಆರೋಪ: ಪೊಲೀಸರಿಂದ ದಾಳಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನೆಲಮಂಗಲ ಶಿಬಿರದ ಬಮೂಲ್ ನಿರ್ದೇಶಕ ಜಿ. ಆರ್. ಭಾಸ್ಕರ್, "ಕಲಬೆರಕೆ ಪ್ರಕರಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ರೂಟ್ 13 ಎಲ್ಲಾ ಡೈರಿಗಳ ಹಾಲಿನ ಜಿಡ್ಡಿನ ಅಂಶ ಮತ್ತು ಕಲಬೆರೆಕೆಯಾಗಿದ್ದರೇ ದಿನನಿತ್ಯ ಬರುವ ಬಮೂಲ್ ಕೇಂದ್ರ ಘಟಕದ ವರದಿಯಲ್ಲಿ ತಿಳಿಯುತ್ತಿತ್ತು. ಆದರೆ ಯಾವುದೇ ಅಂಶ ಕಂಡಿಲ್ಲ. ಸಮಗ್ರ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಪ್ರಾಥಮಿಕ ದಂಡ ಪ್ರಯೋಗದ ಹಣ ಸಹ ಬಮೂಲ್ಗೆ ಸೇರಲಿದೆ. ಕಲಬೆರಕೆ ನಡೆಸುತ್ತಿದ್ದ ವಾಹನಕ್ಕೆ ನಿರ್ಬಂಧ ಹೇರಿದ್ದೇವೆ. ಹೊಸ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಹಾಲು ವರ್ಗಾಯಿಸುವ ವೇಳೆ ಸಂಘದ ಕಾರ್ಯದರ್ಶಿ ಮೇಲುಸ್ತುವಾರಿಗೆ ಇನ್ನಷ್ಟು ಒತ್ತು ನೀಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ನಕಲಿ ದಾಖಲೆ ಪಡೆದು ಭಾರತದ ನಿವಾಸಿಗಳಲ್ಲದವರಿಗೆ ಪಾಸ್‌ಪೋರ್ಟ್ ವಿತರಣೆ.. ಸೇವಾ ಕೇಂದ್ರದ ಹಿರಿಯ ಅಧಿಕಾರಿ ಸೇರಿ ಇಬ್ಬರ ಬಂಧನ