ದೇವನಹಳ್ಳಿ : ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಪ್ರವೇಶಿಸಲು ಯತ್ನಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪರನ್ನ ಪ್ರವೇಶ ದ್ವಾರದಲ್ಲಿಯೇ ತಡೆದ ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಕಳೆದ ಆರು ದಿನಗಳಿಂದ ದೇವನಹಳ್ಳಿ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಮಧ್ಯಪ್ರದೇಶ ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಇಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ರೆಸಾರ್ಟ್ ಪ್ರವೇಶಿಸಲು ಮುಂದಾದಾಗ ಪ್ರವೇಶ ದ್ವಾರದಲ್ಲಿಯೇ ಅವರನ್ನ ಪೊಲೀಸರು ತಡೆದರು.
ಈ ವೇಳೆ ಪೊಲೀಸರಿಗೆ ಮನವಿ ಮಾಡಿದ ಉಗ್ರಪ್ಪ, ನಾನು ಸೊಣ್ಣೇನಹಳ್ಳಿ ಗ್ರಾಮದ ಕಾರ್ಯಕ್ರಮಕ್ಕೆ ಬಂದಿದ್ದು, ಮಧ್ಯಪ್ರದೇಶ ಶಾಸಕರ ಭೇಟಿಯಾಗಲು ಅಲ್ಲ. ಸಂವಿಧಾನ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವ ವಿರೊಧಿ ಕೆಲಸವನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡುತ್ತಿವೆ. ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ನಮ್ಮ ಕಾಂಗ್ರೆಸ್ ಶಾಸಕರನ್ನ ಅಕ್ರಮವಾಗಿ ಬಂಧಿಸಿಡಲಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಕುದುರೆ ವ್ಯಾಪಾರ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರವು ಪೊಲೀಸರ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದರು.