ದೊಡ್ಡಬಳ್ಳಾಪುರ : ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಜಾಗವನ್ನು ಅಕ್ರಮವಾಗಿ 6 ಜನರಿಗೆ ನಿವೇಶನ ಮಂಜೂರು ಮಾಡಲಾಗಿತ್ತು. ಈ ಕುರಿತಂತೆ ಈಟಿವಿ ಭಾರತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅಕ್ರಮವಾಗಿ ನಿವೇಶನ ಹಂಚಿಕೆಯಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿವೇಶನ ಜಾಗವನ್ನ ಗ್ರಾಪಂ ವಶಕ್ಕೆ ಪಡೆದಿದೆ.
ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿರುಮಗೊಂಡನಹಳ್ಳಿಯ ಗ್ರಾಮದ ಸರ್ಕಾರಿ ಶಾಲೆ ಮುಂಭಾಗದ ಜಾಗವನ್ನು 1991ರಲ್ಲಿ ಆಶ್ರಯ ಯೋಜನೆಯಡಿ ಗ್ರಾಮದ 35 ಜನರಿಗೆ ಜನತಾ ಸೈಟ್ ಹಂಚಿಕೆ ಮಾಡಲಾಗಿತ್ತು.
ರಾಜಕೀಯ ಪ್ರಭಾವದಿಂದ 40x30 ವಿಸ್ತೀರ್ಣದ ನಿವೇಶನದ ಬದಲಿಗೆ 40x25 ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಲಾಗಿತ್ತು. ಉಳಿದ ಜಾಗವನ್ನು ರಾಜಕೀಯ ಪ್ರಭಾವಿಗಳ ಬೆಂಬಲಿಗರಾದ ಸೋಮಶೇಖರ್, ಮಂಜುನಾಥ್, ಈರಪ್ಪ, ಮುನಿಕೃಷ್ಣಪ್ಪ, ಮೂರ್ತಿ, ಮುನಿಯಮ್ಮ ಸೇರಿದಂತೆ 6 ಜನರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು.
ಅಕ್ರಮ ನಿವೇಶನ ಹಂಚಿಕೆಯಾಗಿರುವ ಬಗ್ಗೆ ಗ್ರಾಮದ ಮಾಜಿ ಗ್ರಾಪಂ ಸದಸ್ಯ ನಂಜೇಗೌಡರು ದೂರು ನೀಡಿ ಸರ್ಕಾರಿ ಜಾಗವನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಬೇಕೆಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದರು.
ಹಾಡೋನಹಳ್ಳಿ ಗ್ರಾಪಂನಲ್ಲಿ ನಡಿದಿದ್ದ ಅಕ್ರಮ ನಿವೇಶನ ಹಂಚಿಕೆಯ ಬಗ್ಗೆ ಈಟಿವಿ ಭಾರತ ಜೂನ್ 11ರಂದು ಸರ್ಕಾರಿ ಜಾಗವನ್ನು ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಪಂ ಸಿಇಒ ರವಿಕುಮಾರ್ ಜೂನ್ 27ರಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯನವರಿಗೆ 24 ಗಂಟೆಯೊಳಗೆ ವರದಿ ನೀಡುವಂತೆ ಪತ್ರ ಬರೆದರು.
ಸಿಇಒರವರ ಆದೇಶದಂತೆ ಜೂನ್ 29ರಂದು ವಿಚಾರಣೆ ನಡೆಸಿ ಸದರಿ ಜಾಗವು ಸರ್ಕಾರಿ ಜಾಗವಾಗಿದೆ. ಸರ್ಕಾರದಿಂದ ಅಥವಾ ಜಿಲ್ಲಾಧಿಕಾರಿಗಳಿಂದ ಹಕ್ಕು ಪತ್ರ ವಿತರಣೆ ಮಾಡಲು ಆದೇಶವಾಗಿರುವುದಿಲ್ಲ. ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 269 (2)ರನ್ವಯ ವಜಾ ಮಾಡಿ ಸರ್ಕಾರಿ ಜಾಗವನ್ನು ಗ್ರಾಪಂ ವಶಕ್ಕೆ ನೀಡಲಾಗಿದೆ.
ಅಕ್ರಮವಾಗಿ ಕಬಳಿಸಿದ್ದ ಜಾಗದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬುದು ಗ್ರಾಮಸ್ಥರ ಮನವಿಯಾಗಿದೆ. ಇನ್ನು, ಅಕ್ರಮ ನಿವೇಶನ ಹಂಚಿಕೆ ಬಗ್ಗೆ ವರದಿ ಮಾಡಿ ಜಾಗವನ್ನು ಗ್ರಾಪಂ ವಶಕ್ಕೆ ಪಡೆಯಲು ಈಟಿವಿ ಭಾರತ ಮಾಡಿದ ವರದಿ ಸಹಕಾರಿಯಾಗಿದ್ದಕ್ಕೆ ಧನ್ಯವಾದ ಸಲ್ಲಿಸಿದರು.