ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡ ವೈದ್ಯರೊಬ್ಬ ಶಸ್ತ್ರಚಿಕಿತ್ಸೆ ಮಾಡಲು ಹಣ ಪಡೆಯುತ್ತಿದ್ದ. ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿ ಆರೋಗ್ಯ ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ, ವೈದ್ಯನ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಹೌದು, ಹೊಸಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯ ಮೋಹನ್‌ದಾಸ್, ಕುಟುಂಬ ಕಲ್ಯಾಣ ಯೋಜನೆಯಡಿ ಶಾಶ್ವತವಾಗಿ ಮಕ್ಕಳಾಗದಂತೆ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಳ್ಳಲು ಬರುತ್ತಿದ್ದ ಬಡ ಮತ್ತು ಮಧ್ಯಮ ಕುಟುಂಬದ ಮಹಿಳೆಯರಿಂದ ನಾಲ್ಕು ಸಾವಿರ ರೂ. ಹಣ ಪಡೆದು ಕೊಳ್ಳುತ್ತಿದ್ದರು. ಇದರ ಕುರಿತು ನೊಂದ ಮಹಿಳೆಯರು ಈಟಿವಿ ಭಾರತ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದರು. ಇದನ್ನು ಈಟಿವಿ ಭಾರತ್ ವಿಸ್ತೃತವಾಗಿ ವರದಿ ಮಾಡಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲೆಯ ನೋಡಲ್ ಅಧಿಕಾರಿ ಅರುಣ್ ಕುಮಾರ್, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯ ಮೋಹನ್ ದಾಸ್ ಸೇರಿದಂತೆ ಕೆಲವು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಬಳಿಕ ಮಾತನಾಡಿದ ಜಿಲ್ಲೆಯ ನೋಡಲ್ ಅಧಿಕಾರಿ ಅರುಣ್ ಕುಮಾರ್, ಈ ಆಸ್ಪತ್ರೆಯ ವೈದ್ಯ ಮೋಹನ್ ದಾಸ್ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಮತ್ತು ಸಾರ್ವಜನಿಕರು ನೀಡಿದ ದೂರಿನ ಮೇಲೆ ತನಿಖೆ ನಡೆಸುತ್ತಿದ್ದೇವೆ. ಇಂದು ಮೋಹನ್ ದಾಸ್ ಮತ್ತು ಆಸ್ಪತ್ರೆಯ ಕೆಲ ಸಿಬ್ಬಂದಿ ವಿಚಾರಣೆ ನಡೆಸಿದ್ದು, ಈ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗುತ್ತದೆ. ಈ ವರದಿಯಲ್ಲಿ ವೈದ್ಯರು ತಪ್ಪು ಮಾಡಿದ್ದು ಸಾಬೀತಾದಲ್ಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.