ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ 7 ಭ್ರೂಣಗಳ ಶವ ಪತ್ತೆಯಾಗಿದ್ದು, ಇದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪಟ್ಟಣದ ಹಳ್ಳದಲ್ಲಿ 7 ಭ್ರೂಣಗಳ ಪತ್ತೆಯಾಗಿದ್ದು, ಹತ್ಯೆ ನಡೆದಿರುವ ಸಂಶಯ ಇದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಸ್ಪತ್ರೆಯ ಸುತ್ತಲಿನ 6 ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಅವರು ಯಾರೇ ಆಗಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಭ್ರೂಣಹತ್ಯೆ ಮಹಾ ಅಪರಾಧ. ಭ್ರೂಣಹತ್ಯೆ ತಡೆಗೆ ಇಲಾಖೆ ವತಿಯಿಂದ ಆಂದೋಲನ, ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೂ ಇಂತಹ ಕೃತ್ಯ ನಡೆದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತದ್ದು. ಹಾಗಾಗಿ ತಪ್ಪು ಮಾಡಿದವರು ಯಾರೇ ಆಗಿರಲಿ, ಯಾರದ್ದೇ ಒತ್ತಡ ಬಂದರೂ ತಲೆಕೆಡಿಸಿಕೊಳ್ಳದೆ ಕ್ರಮ ಕೈಗೊಳ್ಳಲು ಸೂಚನೆ ನೀಡಿಲಾಗಿದೆ ಎಂದರು.
ಪತ್ತೆಯಾದ ಏಳು ಭ್ರೂಣಗಳಿಗೆ ಸಂಬಂಧಿಸಿ ಸ್ಕ್ಯಾನಿಂಗ್ ಸೆಂಟರ್ ಹಾಗೂ ಹೆರಿಗೆ ಅಸ್ಪತ್ರೆಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಎರಡು ಖಾಸಗಿ ಆಸ್ಪತ್ರೆಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಬೆಳಗಾವಿಯ ಡಿಹೆಚ್ಒ ಮಹೇಶ್ ಕೋಣಿ ನೇತೃತ್ವದಲ್ಲಿ ದಾಳಿ ನಡೆಸಿ, ವೆಂಕಟೇಶ್ವರ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಯನ್ನು ಜಪ್ತಿ ಸಹ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿ ಭ್ರೂಣ ಪತ್ತೆ ಪ್ರಕರಣ-ಪ್ರಯೋಗಾಲಯದ ವರದಿ ಆಧರಿಸಿ ಕ್ರಮ: ಡಿಹೆಚ್ಒ