ದೊಡ್ಡಬಳ್ಳಾಪುರ: ಕೊರೊನಾ ಹಿನ್ನೆಲೆಯಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಕಡಿವಾಣ ಹಾಕಿರುವ ಸರ್ಕಾರ 5 ದಿನಗಳ ಆಚರಣೆಗೆ ಮಾತ್ರ ಅನುಮತಿಸಿದೆ. ಕೋವಿಡ್‌ಪೂರ್ವ ವರ್ಷಗಳಲ್ಲಿ ಗಣೇಶೋತ್ಸವದಲ್ಲಿ ತಮಟೆ ಬಾರಿಸುವವರಿಗೆ ಫುಲ್ ಡಿಮ್ಯಾಂಡ್ ಇರುತ್ತಿತ್ತು. ಆದರೆ ಸರ್ಕಾರದ ತೀರ್ಮಾನ ಈ ವೃತ್ತಿಯ ಜನರನ್ನು ಕಂಗಾಲಾಗಿಸಿದೆ.
ಗಣೇಶ ಮೂರ್ತಿ ನಿಮಜ್ಜನೆ ಮಾಡುವ ಮುನ್ನ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯ ಸಡಗರವನ್ನು ಹೆಚ್ಚಿಸುವುದು ತಮಟೆ ಬಾರಿಸುವವರು. ಈ ಬಾರಿ ಸಂಭ್ರಮಾಚರಣೆಗೆ ಸರ್ಕಾರ ಅಂಕುಶ ಹಾಕಿರುವ ಕಾರಣ ತಮಟೆ ಬಾರಿಸುವವರು ಆರ್ಥಿಕ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.
ಕೊರೊನಾಗೂ ಮುನ್ನ ಗಣೇಶೋತ್ಸವದಲ್ಲಿ ತಮಟೆ ಬಾರಿಸುವವರಿಗೆ ಮೂರು ತಿಂಗಳವರೆಗೂ ಬೇಡಿಕೆ ಬರುತ್ತಿತ್ತಂತೆ. ಈ ಅವಧಿಯಲ್ಲಿ ಒಬ್ಬೊಬ್ಬ ತಮಟೆ ಬಾರಿಸುವವ ಅಂದಾಜು 1 ಲಕ್ಷಕ್ಕೂ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದ. ಈ ಹಣದಿಂದ ವರ್ಷವಿಡೀ ತಮ್ಮ ಜೀವನ ಸಾಗಿಸುತ್ತಿದ್ದರು.
ವಂಶಪಾರಂಪರ್ಯವಾಗಿ ತಮಟೆ ಕಲೆ ಕಲಿತಿರುವ ಯುವಕರಿಗೆ ತಮಟೆ ಬಾರಿಸುವುದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಹೊಟ್ಟೆ ಹೊರೆಯುವ ಕಾಯಕದೊಂದಿಗೆ ಜನಪದ ಕಲೆಯನ್ನು ಕೂಡಾ ಇವರು ಉಳಿಸಿಕೊಂಡು ಬರುತ್ತಿದ್ದಾರೆ. ಜಾತ್ರೆ, ಕರಗ, ಪೂಜಾ ಕುಣಿತ ಸೇರಿದಂತೆ ಹಲವು ಜನಪದ ಕಲೆಗಳಿಗೆ ತಮಟೆ ಬಾರಿಸಬೇಕು. ಇದೇ ವೇಳೆ, ತಮಟೆ ಬಾರಿಸುವ ಕಲಾವಿದರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತಿಲ್ಲ ಅನ್ನುವ ಕೊರಗು ಇವರನ್ನು ಕಾಡುತ್ತಿದೆ.