ಆನೇಕಲ್; ನಗರದ ಆರ್ಟಿಒ ಕಚೇರಿ ಮುಂಭಾಗ ವಕೀಲರು, ನ್ಯಾಯಾಧೀಶರ ಮುಂದೆ ನಿಂತು ರಸ್ತೆ ನಿಯಮಗಳ ಕುರಿತು ವಿಶೇಷ ಬೋಧನೆ ಮಾಡಿದ್ದ ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್ ತಾವೇ ಕಾರು ಚಲಾವಣೆ ಮಾಡ್ಕೊಂಡು ಹೋಗುವಾಗ ನಿಂತಿದ್ದ ಆಟೋಗೆ ಗುದ್ದಿದ್ದರು. ಈ ಘಟನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.
ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈಗೆ ಗಾಯವಾಗಿತ್ತು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್ನನ್ನು ಆಸ್ಪತ್ರೆಗೆ ಸಾಗಿಸಿ ಇನ್ಸ್ಪೆಕ್ಟರ್ ಬಳಿ ನ್ಯಾಯ ಕೇಳಿದ್ದರು. ಇನ್ಸ್ಪೆಕ್ಟರ್ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್ಪೆಕ್ಟರ್ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ಇನ್ಸ್ಪೆಕ್ಟರ್ ಜೊತೆ ವಾಗ್ವಾದ ನಡೆಸುವ ವಿಡಿಯೋವನ್ನು ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಮಾಡಿದ್ದರು. ಅಷ್ಟರಲ್ಲಿ ಪೊಲೀಸರಿಗೂ ಮಾಹಿತಿ ಸಿಕಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದರು. ನಂತರ ಅವರನ್ನ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್ಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಪ್ರತಿಭಟನಾಕಾರರು ಆರೋಪಿಸಿದಂತೆ ಇನ್ಸ್ಪೆಕ್ಟರ್ ಮದ್ಯ ಸೇವನೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.