ಆನೇಕಲ್(ಬೆಂಗಳೂರು): ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಾಜಿ ಇಸ್ರೋ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್ರಿಗೆ ಸ್ಟಂಟ್ ಅಳವಡಿಸಲಾಗಿದೆ ಎಂದು ಹಿರಿಯ ಹೃದ್ರೋಗ ತಜ್ಞ ಡಾ ಭಗೀರಥ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪ್ರಥಮ ಚಿಕಿತ್ಸೆ ನೀಡಿದ್ದ ನಾರಾಯಣ ಹೆಲ್ತ್ ಸಿಟಿ ವೈದ್ಯರು, ಇಂದು ಬೆಳಗ್ಗೆ ಕಸ್ತೂರಿ ರಂಗನ್ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿ ರಕ್ತದೊತ್ತಡ, ರಕ್ತ ಪರೀಕ್ಷೆ, ಇಸಿಜಿ ಮಾಡಿದ ನಂತರ ಕಾರ್ಡಿಯಾಕ್ ಎಂಆರ್‌ಐ ಪರೀಕ್ಷೆಗೆ ಒಳಪಡಿಸಿದ್ದರು. ಅನಂತರ ಹೃದಯ ನಾಳದಲ್ಲಿ ಎಷ್ಟರ ಮಟ್ಟಿಗೆ ಕ್ಯಾಲ್ಸಿಯಂ ಸಂಗ್ರಹವಿದೆ ಎಂಬುದನ್ನು ಖಚಿತ ಪಡಿಸಿಕೊಂಡು ಮಧ್ಯಾಹ್ನದ ವೇಳೆಗೆ ಮೂರು ಬಾರಿ ಪಲ್ಸ್ ಕೊಡುವ ಮುಖಾಂತರ ಹೃದಯನಾಳದ ಕ್ಯಾಲ್ಸಿಯಂನ್ನು ನಿಯಂತ್ರಣಕ್ಕೆ ತಂದ ನಂತರ ಸ್ಟಂಟ್ ಹಾಕಲಾಗಿದೆ ಎಂದು ಡಾ ಭಗೀರಥ ಮಾಹಿತಿ ನೀಡಿದರು.
ಹೀಗಾಗಿ ಕಸ್ತೂರಿ ರಂಗನ್ ಹೃದಯ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಜೊತೆಗೆ ಸ್ಟಂಟ್ ಅಳವಡಿಕೆಯ ನಂತರ ಕಸ್ತೂರಿ ರಂಗನ್ ಚೇತರಿಸಿಕೊಳ್ಳುತ್ತಿದ್ದಾರೆ. ಅದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಡಾ.ಉದಯ್ ಖನೋಲ್ಕರ್, ಡಾ.ಪ್ರವೀಣ್ ಕುಮಾರ್ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶ್ರೀಲಂಕಾದ ಕೊಲಂಬೊಗೆ ತೆರಳಿದ್ದ ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿತ್ತು. ಕಸ್ತೂರಿ ರಂಗನ್ ಅವರಿಗೆ 83 ವರ್ಷ ವಯಸ್ಸಾಗಿದ್ದು, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ಗೆ ಲಘು ಹೃದಯಾಘಾತ: ಶ್ರೀಲಂಕಾದಿಂದ ಬೆಂಗಳೂರಿಗೆ ಶಿಫ್ಟ್