ದೊಡ್ಡಬಳ್ಳಾಪುರ: ಕೊರೊನಾ ವೈರಸ್ ಆರ್ಭಟ ಆರಂಭವಾದಾಗಿನಿಂದ ಒಬ್ಬೊಬ್ಬರು ಒಂದೊಂದು ರೀತಿ ಜನರಿಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಪೊಲೀಸರು ಕೈ ಮುಗಿದು ಜನರಲ್ಲಿ ಬೇಡಿಕೊಂಡರೆ, ಕೆಲವರು ಸ್ವಯಂಪ್ರೇರಿತರಾಗಿ ರಸ್ತೆ ಬದಿ ಕೊರೊನಾ ಚಿತ್ರಗಳನ್ನು ಬಿಡಿಸುವ ಮೂಲಕ ಹಾಡುಗಳ ಮೂಲಕ, ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಇದೀಗ ಗ್ರಾಮೀಣ ಜನರಿಗೆ ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೊಡ್ಡಬಳ್ಳಾಪುರ ಪೊಲೀಸರು ತಾಲೂಕಿನ ಗುಂಡಮ್ಮಗೆರೆ ಕೆರೆ ಬಳಿ ಹಾಗೂ ಸೊಣ್ಣೆನಹಳ್ಳಿಯ ದೊಡ್ಡಮ್ಮ ದೇವಸ್ಥಾನದ ಸಮೀಪ ಸಸಿಗಳನ್ನು ನೆಟ್ಟರು. ನಂತರ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಕೊರೊನಾ ಸೋಂಕನ್ನು ತಡೆಗಟ್ಟಲು ಘೋಷಿಸಿರುವ ಲಾಕ್ಡೌನ್ಗೆ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸರ್ಕಾರ ಮೇ 3ರವರೆಗೆ ಲಾಕ್ಡೌನ್ ಜಾರಿಗೊಳಿಸಿದೆ. ಜನರು ಮನೆಯಿಂದ ಹೊರಬರದೆ ನಿಯಮ ಪಾಲಿಸಬೇಕು. ಅಗತ್ಯ ವಸ್ತುಗಳನ್ನು ಕೊಳ್ಳುವ ವೇಳೆ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬೇಬಿ ವಾಲೇಕರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.