ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ನವೆಂಬರ್ 29ರಂದು ದೊಡ್ಡಬಳ್ಳಾಪುರಕ್ಕೆ ಪಂಚರತ್ನ ಯಾತ್ರೆ ಆಗಮಿಸುತ್ತಿರುವ ಹಿನ್ನೆಲೆ ಜೆಡಿಎಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ, ಆದರೆ ಒಗ್ಗಟ್ಪಿನ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಪಂಚರತ್ನ ರಥಯಾತ್ರೆಯ ಮೂಲಕ ಕುಮಾರಸ್ವಾಮಿ ನವೆಂಬರ್ 29 ರಂದು ದೊಡ್ಡಬಳ್ಳಾಪುರ ತಾಲೂಕಿಗೆ ಆಗಮಿಸುತ್ತಿದ್ದಾರೆ, ಜೆಡಿಎಸ್ ಮುಖಂಡರಾದ ಬಿ.ಮುನೇಗೌಡ ಮತ್ತು ಎಚ್. ಅಪ್ಪಯ್ಯಣ್ಣ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಲಾಯಿತು. ಇದೇ ಸಮಯದಲ್ಲಿ ಮಾತನಾಡಿದ ಮುಖಂಡರು ಎಲ್ಲ ಪಕ್ಷದಲ್ಲಿ ಇರುವಂತೆ ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಇದೆಲ್ಲ ಮರೆತು ಒಗ್ಗಟ್ಟಿನ ಪ್ರದರ್ಶನ ಮಾಡುವ ಮೂಲಕ ಜಿಲ್ಲೆಯ ಮಾರ್ಯಾದೆ ಮತ್ತು ಕುಮಾರಣ್ಣನ ಗೌರವ ಉಳಿಸಬೇಕು ಎಂದು ಮನವಿ ಮಾಡಿದರು.
ಆದರೆ ಒಗ್ಗಟ್ಟಿನ ಮಂತ್ರ ಜಪಿಸಿದ ಮರುಕ್ಷಣದಲ್ಲೇ ಜೆಡಿಎಸ್ ಜಿಲ್ಲಾಧ್ಯಕ್ಷ ಹುಸ್ಕೂರ್ ಆನಂದ್ ಮತ್ತು ತಾಲೂಕು ಅಧ್ಯಕ್ಷರ ವೈಫಲ್ಯದ ಬಗ್ಗೆ ಕಿಡಿಕಾರಿದರು. ಇವರ ವೈಫಲ್ಯದಿಂದನೇ ಕಾರ್ಯಕರ್ತರು ಬೇಸತ್ತಿದ್ದಾರೆ. ಪಂಚರತ್ನ ರಥಯಾತ್ರೆಯ ರೂಟ್ ಮ್ಯಾಪ್ ಬಗ್ಗೆ ನನ್ನೊಂದಿಗೆ ಒಂದು ದಿನ ಸಹ ಚರ್ಚೆ ಮಾಡಿಲ್ಲ. ಮುನೇಗೌಡರು ಜಿಲ್ಲಾಧ್ಯಕ್ಷರಾಗಿರುವ ತನಕ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಗೆಲ್ಲುವುದಿಲ್ಲವೆಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಎಲ್ಲಾ ಮುಖಂಡರು ಒಗ್ಗಟ್ಟಾಗಿದ್ದೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅತ್ಯಧಿಕ ಮತಗಳಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ 40 ಪರ್ಸೆಂಟ್ ಸರ್ಕಾರವಾದರೆ. ಕಾಂಗ್ರೆಸ್ 25 ಪರ್ಸೆಂಟ್ ಸರ್ಕಾರ, ಆದರೆ ಜೆಡಿಎಸ್ 0 ಪರ್ಸೆಂಟ್ ಸರ್ಕಾರ ಎಂದರು.
ಇದನ್ನೂ ಓದಿ : ಪಂಚರತ್ನ ರಥಯಾತ್ರೆ ವೇಳೆ ಮಗುವಿಗೆ ನಾಮಕರಣ ಮಾಡಿದ ಕುಮಾರಸ್ವಾಮಿ