ದೊಡ್ಡಬಳ್ಳಾಪುರ : ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಸರಳ ಕರಗ ಮಹೋತ್ಸವ ಆಚರಿಸಲಾಗಿದೆ. ಆದರೆ, ಈ ಬಾರಿಯ ದೊಡ್ಡಬಳ್ಳಾಪುರ ಕರಗ ಅದ್ದೂರಿಯಾಗಿ ನಡೆಯಲಿದೆ. ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರಗವನ್ನು ಪೂಜಾರಿ ಭೀಮರಾಜು ಹೊರಲಿದ್ದು, ಇದು ಅವರ 97ನೇ ಕರಗವಾಗಲಿದೆ.
ದೊಡ್ಡಬಳ್ಳಾಪುರ ಕರಗ ಮಹೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅವತಿ ಪಾಳೇಗಾರರ ಕಾಲದಲ್ಲಿ ದೊಡ್ಡಬಳ್ಳಾಪುರ ಕರಗ ಮಹೋತ್ಸವ ಪ್ರಾರಂಭವಾಗಿದೆ. ತಿಗಳ ಸಮುದಾಯ ವಹ್ನಿಕುಲ ಕ್ಷತ್ರೀಯ ಜನಾಂಗ ಕರಗ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ.
ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಶ್ರೀಧರ್ಮರಾಯಸ್ವಾಮಿ ದೇವಸ್ಥಾನಲ್ಲಿ ಮೇ 16ರ ಹುಣ್ಣಿಮೆ ದಿನ ಕರಗ ಮಹೋತ್ಸವ ನಡೆಯಲಿದೆ. ಇದಕ್ಕೂ ಮುನ್ನ ಇಂದು ಮುಂಜಾನೆ ಹಸಿ ಕರಗ ನಡೆಯುತ್ತದೆ. 16ರ ರಾತ್ರಿ 11:30ಕ್ಕೆ ಹೂವಿನ ಕರಗ ನಡೆಯಲಿದೆ.
ಧರ್ಮರಾಯ ದೇವಸ್ಥಾನದಿಂದ ಪ್ರಾರಂಭವಾಗುವ ಕರಗ ನಗರದ ವಿವಿಧ ಏರಿಯಾ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲಿದೆ. ನಗರದ ಆಸ್ಪತ್ರೆ ಸರ್ಕಲ್, ಮಾರಮ್ಮನ ದೇವಸ್ಥಾನ, ತೇರಿನಬೀದಿ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಇಸ್ಲಾಂಪುರ, ಮುತ್ಯಾಲಮ್ಮ ದೇವಸ್ಥಾನ, ಕಚೇರಿಪಾಳ್ಯ, ದರ್ಗಾ, ಮಾರುತಿನಗರ, ಕುಂಬಾರಪೇಟೆ, ಚಿಕ್ಕಪೇಟೆಯ ಮಾರ್ಗದಲ್ಲಿ ಕರಗ ಸಾಗಲಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಕರಗ ಮಹೋತ್ಸವದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಳೇನ ಅಗ್ರಹಾರ ಕೆರೆ ಪರಿಶೀಲಿಸಿದ ಕೇಂದ್ರ ಹಣಕಾಸು ಸಚಿವೆ