ದೊಡ್ಡಬಳ್ಳಾಪುರ : ಅಪಘಾತ ತಡೆ, ವಾಹನ ದಟ್ಟಣೆ ನಿಯಂತ್ರಣ, ಸರ್ಕಾರಿ ಜಾಗ ಉಳಿಸುವ ನಿಟ್ಟಿನಲ್ಲಿ ರಸ್ತೆ ಬದಿಯ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ದೊಡ್ಡಬಳ್ಳಾಪುರ ನಗರಸಭೆ ಇಂದಿನಿಂದ ಆರಂಭಿಸಿದೆ.
ಕಾರ್ಯಾಚರಣೆಗೆ ಬೀದಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಅಳಲು ತೋಡಿಕೊಂಡರು. ಏಕಾಏಕಿ ತೆರವು ಕಾರ್ಯಚರಣೆ ಮಾಡುತ್ತಿರುವುದು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೀದಿ ಬದಿಯ ವ್ಯಾಪಾರಿ ಚೈತ್ರಾ ಮಾತನಾಡಿ, ನಾವು ಕಳೆದ 20 ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದು ಏಕೆ?. ನಮಗೆ ನಗರಸಭೆಯವರು ಅನ್ಯಾಯ ಮಾಡುತ್ತಿದ್ದಾರೆ. ಒಂದು ನಿಮಿಷ ಕೂಡ ಇಲ್ಲಿರಲು ಬಿಡುತ್ತಿಲ್ಲ. ಸಾಮಗ್ರಿ ಚೆಲ್ಲಾಪಿಲ್ಲಿ ಮಾಡುತ್ತಿದ್ದಾರೆ. ವ್ಯಾಪಾರ ನಂಬಿಕೊಂಡು ಸಾಲ ಮಾಡಿಕೊಂಡಿದ್ದೇವೆ. ಮಕ್ಕಳನ್ನು ಸಾಕಬೇಕು. ಹೆಣ್ಣ ಮಕ್ಕಳಾಗಿ ಹೊರಗೆ ಬಂದು ಕೆಲಸ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದೇವೆ. ಯಾರೂ ಒಂದು ರೂಪಾಯಿ ಸಹಾಯ ಮಾಡಿಲ್ಲ. ಈ ರೀತಿ ಮಾಡುತ್ತಿರುವುದರಿಂದ ನಾವು ಏನು ಮಾಡೋದು ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅವರಿಂದ ಯಾವುದೇ ಸಹಾಯ ಬೇಕಿಲ್ಲ. ವ್ಯಾಪಾರ ಮಾಡಲು ಜಾಗ ಕೊಟ್ಟರೆ ಸಾಕು. ಅವರು ಹೇಳಿದಂತೆ ರೂಲ್ಸ್ ಪಾಲನೆ ಮಾಡುತ್ತೇವೆ ಎಂದರು.
ನಮ್ಮ ಮನೆಯವರು ಸುಮಾರು ವರ್ಷಗಳಿಂದ ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ವ್ಯಾಪಾರ ಬಿಟ್ಟರೆ ನಮಗೆ ಏನೂ ಗೊತ್ತಿಲ್ಲ, ನಾವು ಅವಿದ್ಯಾವಂತರು, ಕಡುಬಡವರು ಕೂಡ ಹೌದು. ಆದರೆ ನಮ್ಮ ಮಕ್ಕಳು ನಮ್ಮಂತೆಯೇ ಅವಿದ್ಯಾವಂತರಾಗಿ, ಕಡುಬಡವರಾಗಿ ಇರಬಾರದು ಎರಡಕ್ಷರ ಕಲಿತು ಒಂದೊಳ್ಳೆ ಹುದ್ದೆ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ನಮ್ಮ ಆಸೆ. ಆದರೆ ನಮ್ಮ ಆಸೆ ನಿರಾಸೆಯಾಗುವ ಭಯದಲ್ಲಿದ್ದೇವೆ ಎಂದು ರಸ್ತೆ ಬದಿ ವ್ಯಾಪಾರಿ ಶೈಲಶ್ರೀ ಎಂಬವರು ತಮ್ಮ ಅಳಲು ತೋಡಿಕೊಂಡರು.
ಯಾರೋ ಪ್ರಭಾವಿಗಳ ಮಾತಿಗೆ ಅಧಿಕಾರಿಗಳು ಮಣಿದು ರಸ್ತೆಬದಿ ವ್ಯಾಪಾರಸ್ಥರನ್ನು ಬೀದಿಗೆ ತಂದಿದ್ದಾರೆ. ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಪಕ್ಷಪಾತ, ದಬ್ಬಾಳಿಕೆಯಿಂದ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲು ಇಂದು ಬೆಳಿಗ್ಗೆ ಬೃಹತ್ ಜಾಥಾ ಮೂಲಕ ನಗರಸಭೆ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡಲಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದರು.
ಇದನ್ನೂ ಓದಿ : ಮಂಡ್ಯದಲ್ಲಿ ಕಾವೇರಿ ಕಿಚ್ಚು: ಕೇಂದ್ರ, ರಾಜ್ಯ ಸರ್ಕಾರಗಳ ಅಣುಕು ಶವಯಾತ್ರೆ.. ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಹೆದ್ದಾರಿ ಬಂದ್