ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಕೊರೊನಾ ಚಿಕಿತ್ಸೆ ನೀಡುತ್ತಿದ್ದ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯನ್ನ ಸೀಲ್ಡೌನ್ ಮಾಡುವಂತೆ ಮುಖ್ಯ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಿಗೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂನ್ 26ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಈ ಆಸ್ಪತ್ರೆಯಲ್ಲಿ ಪ್ರತಿದಿನ 50ರಿಂದ 100 ಗಂಟಲು ದ್ರವ ಪರೀಕ್ಷಿಸಲಾಗುತ್ತಿದೆ. ಇದೀಗ ಆಸ್ಪತ್ರೆಯ ಶುಶ್ರೂಷಾಧಿಕಾರಿ, ನಾನ್ ಕ್ಲಿನಿಕಲ್ ಸಿಬ್ಬಂದಿ, ತಂತ್ರಜ್ಞರು, ಸಂದರ್ಶಕಿಗೆ ಸೋಂಕು ತಗುಲಿದ್ದು, ಮುಂದಿನ ದಿನಗಳಲ್ಲಿ ಇತರೆ ಸಿಬ್ಬಂದಿಗೂ ಸೋಂಕು ಹರಡುವ ಭೀತಿಯಿದೆ. ಹೀಗಾಗಿ ಆಸ್ಪತ್ರೆ ಸೀಲ್ಡೌನ್ ಮಾಡುವಂತೆ ಮೇಲಾಧಿಕಾರಿಗಳಿಗೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಇಂದು ದೊಡ್ಡಬಳ್ಳಾಪುರದಲ್ಲಿ 40 ಮಂದಿಗೆ ಸೋಂಕು ದೃಢಪಟ್ಟಿದೆ. ಈವರೆಗೂ ತಾಲೂಕಿನಲ್ಲಿ 129 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.