ಬೆಂಗಳೂರು: ಡಿ. ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ರಿಜ್ವಾನ್ ಬೇಗಂ ಮತ್ತು ತಬಸುಮ್ ಸೈಯದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರ ಮಹಿಳೆಯರ ಕುಟುಂಬ ಸದಸ್ಯರನ್ನು ಪೊಲೀಸರು ಡಿ. ಜೆ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಸಂಬಂಧ ಅಕ್ರಮ ಬಂಧನದಲ್ಲಿಟ್ಟಿದ್ದಾರೆ. ಅವರನ್ನು ಈವರೆಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಹೀಗಾಗಿ ಕುಟುಂಬಸ್ಥರು ಆಂತಕದಲ್ಲಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸರ್ಕಾರದ ಪರ ವಕೀಲರು ವಾದಿಸಿ, ಅರ್ಜಿಯಲ್ಲಿ ಹೆಸರಿಸಿರುವ ಸಮಿವುದ್ದೀನ್, ಖತೀಜಾ ಮತ್ತು ಸೈಯದ್ ಇಮ್ರಾನ್ ರನ್ನು ಆಗಸ್ಟ್ 19 ರಂದು ಬಂಧಿಸಿ, ಮರು ದಿನವೇ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಅರ್ಜಿದಾರರು ಆರೋಪಿಸಿರುವಂತೆ ಯಾರನ್ನು ಅಕ್ರಮ ಬಂಧನದಲ್ಲಿಟ್ಟಿಲ್ಲ ಎಂದು ವಿವರಿಸಿದರು. ಸರ್ಕಾರಿ ವಕೀಲರ ವಾದ ಮಾನ್ಯ ಮಾಡಿದ ಪೀಠ, ಅರ್ಜಿಗಳನ್ನು ವಜಾಗೊಳಿಸಿದೆ.