ಹೊಸಕೋಟೆ: ಅಂಗನವಾಡಿಯಲ್ಲಿ ಜಿರಳೆ,ಇಲಿ ಕಚ್ಚಿದ ವಿಷಪೂರಿತ ಪೌಷ್ಟಿಕ ಆಹಾರ ಪ್ಯಾಕೆಟ್ ವಿತರಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡಬೇಕು. ಆದ್ರೆ ಇಲ್ಲೊಂದು ಅಂಗನವಾಡಿಯಲ್ಲಿ ಸರಿಯಾದ ಸಮಯಕ್ಕೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡದೆ ಇಲಿಗಳು ಹಾಗೂ ಜಿರಳೆ ಕಚ್ಚಿರುವ ಪ್ಯಾಕೆಟ್ ಗಳ ವಿಷಪೂರಿತ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇದರಿಂದ ವಾರ್ಡ್ನ ಜನರು ಆಕ್ರೋಶಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದ ವಾರ್ಡ್ ನಂಬರ್ 4 ರಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ಜರುಗಿದೆ. ಬಾಣಂತಿಯರು ಸರ್ಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಕೇಳಲು ಹೋದ್ರೆ ಮುಂದಿನ ತಿಂಗಳು ನೀಡುತ್ತೇವೆ ಅಂಗನವಾಡಿಯಲ್ಲಿ ಸಹಾಯಕಿ ಇಲ್ಲ ಎಂದು ಉತ್ತರ ನೀಡುತ್ತಿದ್ದಾರಂತೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.