ನೆಲಮಂಗಲ: ತಾಲೂಕಿನ ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘವು ರೈತರು ರಾಸಾಯನಿಕ ಮತ್ತು ಕೀಟನಾಶಕ ಬಳಸಿ ಬೆಳೆದ ತರಕಾರಿಗಳನ್ನು ಖರೀದಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಘಕ್ಕೆ ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಹಾಗೂ ತೋಟಗಾರಿಕೆ ಸಹಾಯಕ ನಿರ್ದೇಶರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೆಲಮಂಗಲದ ಹೊರವಲಯದ ಕೆಂಪಲಿಂಗನಹಳ್ಳಿಯ ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘವು ಸಾವಯವ ಇಲಾಖೆಯಿಂದ ಸರ್ಟಿಫಿಕೇಟ್ ಪಡೆದುಕೊಂಡು ರೈತರಿಂದ ಕಡಿಮೆ ಹಣಕ್ಕೆ ತರಕಾರಿ ಖರೀದಿ ಮಾಡಿ ಸಾವಯವ ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಜೊತೆಗೆ ಇವರು ಮಾರುವ ತರಕಾರಿ ಪೂರ್ಣ ಗುಣಮಟ್ಟದ ಸಾವಯವ ಕೃಷಿಯಿಂದ ಬೆಳೆದಂತಹ ತರಕಾರಿಯಲ್ಲ. ರಾಸಾಯನಿಕ ಗೊಬ್ಬರ ಮತ್ತು ಔಷಧವನ್ನು ಸಿಂಪಡಿಸಿದ ತರಕಾರಿಗಳನ್ನು ಮಾರಾಟ ಮಾಡಿ ಸಾವಯವ ತರಕಾರಿ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶಿವಶಂರ್ .ಎಸ್ ಅವರು ಕೃಷಿ ಇಲಾಖೆಗೆ ದೂರು ನೀಡಿದ್ದರು.
ಅಧಿಕಾರಿಗಳಿಂದ ಪರಿಶೀಲನೆ:
ದೂರು ಬಂದ ಹಿನ್ನೆಲೆಯಲ್ಲಿ ಇಂದು ನೆಲಮಂಗಲ ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಹಾಗೂ ಸಹಾಯಕ ನಿರ್ದೇಶಕ ಸೇರಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇಲ್ಲಿನ ರೈತರು ಹಾಗೂ ಸಿಬ್ಬಂದಿ ಜೊತೆ ಚರ್ಚಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಘದ ರೈತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ತಪ್ಪಿತಸ್ಥರ ವಿರುದ್ಧ ಕ್ರಮ:
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಂಪೂರ್ಣವಾಗಿ ರೈತರ ಹಿತ ರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ರೈತರಿಗೆ ಸಂಪೂರ್ಣವಾಗಿ ಬೆಂಬಲ ನೀಡಲಾಗುತ್ತದೆ. ಒಂದು ವೇಳೆ ರಾಸಾಯನಿಕ ಔಷಧ ಬಳಸಿ ಅದು ಸಾವಯವ ಕೃಷಿಯಿಂದ ಬೆಳೆದ ಬೆಳೆ ಎಂದು ಮೋಸ ಮಾಡಿದ ರೈತರು ಮತ್ತು ಸಂಘದ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಇಲಾಖೆ ನಿರ್ದೇಶಕ ರಾಘವೇಂದ್ರ ಎಚ್ಚರಿಕೆ ನೀಡಿದರು.